Bengaluru Flights Delay: ದಟ್ಟ ಮಂಜು: ಬೆಂಗಳೂರು ವಿಮಾನ ನಿಲ್ದಾಣದಲ್ಲಿ 41 ವಿಮಾನಗಳ ಹಾರಾಟ ವಿಳಂಬ!

Bengaluru Flights Delay: ದಟ್ಟ ಮಂಜು: ಬೆಂಗಳೂರು ವಿಮಾನ ನಿಲ್ದಾಣದಲ್ಲಿ 41 ವಿಮಾನಗಳ ಹಾರಾಟ ವಿಳಂಬ!

ಬೆಂಗಳೂರು(ನ. 27): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ದಲ್ಲಿ ಗುರುವಾರ ಮುಂಜಾನೆ ದಟ್ಟ ಮಂಜು ಕವಿದ ಪರಿಣಾಮ ಸುಮಾರು 41 ವಿಮಾನಗಳ ಹಾರಾಟ ವಿಳಂಬವಾಗಿದೆ. ಬೆಳಿಗ್ಗೆ 5.30 ರಿಂದಲೇ ವಿಮಾನಗಳ ವೇಳಾಪಟ್ಟಿಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ಎಎನ್‌ಐಗೆ ತಿಳಿಸಿದ್ದಾರೆ.

ಆದರೆ, ವಿಳಂಬವಾದ ವಿಮಾನಗಳ ಸಂಪೂರ್ಣ ವಿವರಗಳು ತಕ್ಷಣಕ್ಕೆ ಲಭ್ಯವಾಗಿಲ್ಲ. ಪ್ರಮುಖ ವಿಮಾನಯಾನ ಸಂಸ್ಥೆಗಳು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಯಾವುದೇ ಮಾಹಿತಿ ಹಂಚಿಕೊಂಡಿಲ್ಲ ಮತ್ತು ಈ ವಿಳಂಬ ಎಷ್ಟು ಸಮಯದವರೆಗೆ ಇರಲಿದೆ ಎಂಬುದು ಸ್ಪಷ್ಟವಾಗಿಲ್ಲ.

ಚಳಿಗಾಲದ ಸಂದರ್ಭದಲ್ಲಿ ಬೆಂಗಳೂರು ಸೇರಿದಂತೆ ಕೆಲ ಭಾರತೀಯ ನಗರಗಳಲ್ಲಿ ವಿಮಾನಗಳ ವಿಳಂಬ ಸಾಮಾನ್ಯವಾಗಿದೆ. ಸಾಮಾನ್ಯವಾಗಿ ಮುಂಜಾನೆ 3 ಗಂಟೆಯಿಂದ 8.30ರ ನಡುವೆ ನೆಲವು ಬೇಗನೆ ತಣ್ಣಗಾಗುವುದರಿಂದ ಗಾಳಿಯಲ್ಲಿರುವ ತೇವಾಂಶವು ಮೇಲ್ಮೈ ಬಳಿ ಘನೀಕರಿಸಿ ದಟ್ಟ ಮಂಜು ರೂಪುಗೊಳ್ಳುತ್ತದೆ. ಇದನ್ನು ‘ರೇಡಿಯೇಶನ್ ಮಂಜು’ (Radiation Fog) ಎಂದು ಕರೆಯಲಾಗುತ್ತದೆ. ನವೆಂಬರ್‌ನಿಂದ ಫೆಬ್ರವರಿವರೆಗಿನ ಅವಧಿಯಲ್ಲಿ ತಾಪಮಾನ ಇಳಿಕೆಯಾದಾಗ ಬೆಂಗಳೂರಿನಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆ.

ಕಳೆದ ನವೆಂಬರ್ 11 ರಂದು ಕೂಡ ದಟ್ಟ ಮಂಜಿನಿಂದಾಗಿ ಕೆಐಎನಲ್ಲಿ ಸುಮಾರು 21 ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿತ್ತು. ಆ ಸಂದರ್ಭದಲ್ಲಿ, ಗೋಚರತೆಯು 50 ಮೀಟರ್‌ನಿಂದ 100 ಮೀಟರ್‌ಗೆ ಇಳಿದಿತ್ತು. ಆಗ 15ಕ್ಕೂ ಹೆಚ್ಚು ವಿಮಾನಗಳು ವಿಳಂಬವಾಗಿ, 6 ವಿಮಾನಗಳನ್ನು (ನಾಲ್ಕು ಚೆನ್ನೈಗೆ ಮತ್ತು ಎರಡು ಹೈದರಾಬಾದ್‌ಗೆ) ಬೇರೆಡೆಗೆ ತಿರುಗಿಸಲಾಗಿತ್ತು ಎಂದು ಬಿಐಎಎಲ್ ಅಧಿಕಾರಿಗಳು ತಿಳಿಸಿದ್ದರು.

ರಾಜ್ಯ