ಬೆಂಗಳೂರು: (ನವೆಂಬರ್ 24) – ಬೆಂಗಳೂರಿನ ಹೊರವಲಯದಲ್ಲಿ ನಡೆದ ಘಟನೆಯಲ್ಲಿ 21 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ತನ್ನ ಸ್ನೇಹಿತನಿಂದಲೇ ಕೊಲೆಯಾಗಿದ್ದಾಳೆ ಎನ್ನಲಾಗಿದೆ. ಬಾಡಿಗೆ ಮನೆಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಆರೋಪಿ ಸ್ನೇಹಿತನನ್ನು ವಶಕ್ಕೆ ಪಡೆದಿದ್ದಾರೆ.

ಮೃತ ವಿದ್ಯಾರ್ಥಿನಿಯನ್ನು ದೇವಿಶ್ರೀ (21) ಎಂದು ಗುರುತಿಸಲಾಗಿದೆ. ಆಂಧ್ರಪ್ರದೇಶ ಮೂಲದ ದೇವಿಶ್ರೀ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಬಿಎ (BBA) ವ್ಯಾಸಂಗ ಮಾಡುತ್ತಿದ್ದರು.ಘಟನೆ ಭಾನುವಾರ ರಾತ್ರಿ ನೆಲಮಂಗಲ ಸಮೀಪದ ತಮ್ಮೇನಹಳ್ಳಿಯಲ್ಲಿ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೇವಿಶ್ರೀಯನ್ನು ಆಕೆಯ ಸ್ನೇಹಿತನೇ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ವೈಯಕ್ತಿಕ ದ್ವೇಷ ಅಥವಾ ಸಂಬಂಧದ ವಿಷಯಕ್ಕೆ ಸಂಬಂಧಿಸಿದಂತೆ ಕೃತ್ಯ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.ಈ ಕುರಿತು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

