ಜಮ್ಮು ಕಾಶ್ಮೀರ: ನವದೆಹಲಿಯ ಕೆಂಪು ಕೋಟೆ (Red Fort) ಬಳಿ ನವೆಂಬರ್ 10 ರಂದು ನಡೆದ ಭೀಕರ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರ ರಾಜ್ಯ ತನಿಖಾ ಸಂಸ್ಥೆ (State Investigation Agency – SIA) ಮತ್ತು ವಿಶೇಷ ಕಾರ್ಯಾಚರಣೆ ಪಡೆ (Special Operations Group – SOG) ಜಂಟಿ ಕಾರ್ಯಾಚರಣೆ ನಡೆಸಿ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದೆ.

ತುಫೈಲ್ ನಿಯಾಜ್ ಭಟ್ (Tufail Niyaz Bhat) ಬಂಧಿತ ಶಂಕಿತ ವ್ಯಕ್ತಿಯಾಗಿದ್ದು, ಈತ ಮೂಲತಃ ಶ್ರೀನಗರದವನಾಗಿದ್ದಾನೆ. ಆದರೆ, ಪುಲ್ವಾಮಾದಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ. ಇತನನ್ನು ಕೈಗಾರಿಕಾ ಪ್ರದೇಶವೊಂದರಿಂದ ವಶಕ್ಕೆ ಪಡೆಯಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಕರೆದೊಯ್ಯಲಾಗಿದೆ.
ದೆಹಲಿ ಸ್ಫೋಟದ ಸಂಚಿನಲ್ಲಿ ಭಟ್ನ ಪಾತ್ರವಿರುವ ಬಗ್ಗೆ ಖಚಿತ ಸಾಕ್ಷ್ಯ ಇದೆ ಎಂದು ಸ್ಥಳೀಯ ಸಿಐಡಿ (CID) ಅಧಿಕಾರಿಯೊಬ್ಬರು ಹಿಂದೂಸ್ತಾನ್ ಟೈಮ್ಸ್ಗೆ ತಿಳಿಸಿದ್ದಾರೆ.
ಈ ಪ್ರಕರಣವು ‘ವೈಟ್-ಕಾಲರ್’ (White-Collar) ಉಗ್ರರ ಜಾಲದೊಂದಿಗೆ ಸಂಪರ್ಕ ಹೊಂದಿದೆ ಎಂದು ತನಿಖಾ ಸಂಸ್ಥೆಗಳು ಶಂಕಿಸಿವೆ.
ನವೆಂಬರ್ 10 ರಂದು ನಡೆದ ಈ ದುರಂತ ಸ್ಫೋಟದಲ್ಲಿ ಆತ್ಮಹತ್ಯಾ ಬಾಂಬರ್ ಉಮರ್ ಉನ್ ನಬಿ (Umar Un Nabi) ಸೇರಿದಂತೆ ಕನಿಷ್ಠ 14 ಜನರು ಸಾವನ್ನಪ್ಪಿದ್ದರು. ಈ ಪ್ರಕರಣದ ಮೂಲವನ್ನು ಕೆದಕಲು J&K ಪೊಲೀಸ್ ಮತ್ತು SIA ತಂಡಗಳು ತೀವ್ರ ತನಿಖೆ ಮುಂದುವರೆಸಿವೆ.

