ICC Women’s ODI World Cup 2025: ಇತಿಹಾಸ ನಿರ್ಮಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡ – ಚೊಚ್ಚಲ ವಿಶ್ವಕಪ್ ಗೆದ್ದ ವನಿತೆಯರು

ICC Women’s ODI World Cup 2025: ಇತಿಹಾಸ ನಿರ್ಮಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡ – ಚೊಚ್ಚಲ ವಿಶ್ವಕಪ್ ಗೆದ್ದ ವನಿತೆಯರು

ನವೀ ಮುಂಬೈ: ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಇತಿಹಾಸ ನಿರ್ಮಿಸಿದೆ. ನವೀ ಮುಂಬೈಯ ಡಿ.ವೈ ಪಾಟೀಲ್ ಕ್ರೀಡಾಂಗಣದಲ್ಲಿ ನಿನ್ನೆ ನಡೆದ 2025ರ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಮಣಿಸಿ, ಭಾರತದ ಮಹಿಳೆಯರು ತಮ್ಮ ಮೊದಲ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತವು 50 ಓವರಿನಲ್ಲಿ 298/7 ರನ್‌ಗಳನ್ನು ದಾಖಲಿಸಿತು. ಶಫಾಲಿ ವರ್ಮಾ 78 ಬಾಲ್ ಗಳಲ್ಲಿ 87 ರನ್‌ಗಳ ಅದ್ಭುತ ಆಟದೊಂದಿಗೆ ತಂಡಕ್ಕೆ ಸ್ಫೂರ್ತಿ ನೀಡಿದರು. ಸ್ಮೃತಿ ಮಂಧನ 45 ರನ್ ಗಳಿಸಿದರು ಮತ್ತು ದೀಪ್ತಿ ಶರ್ಮಾ 58 ರನ್‌ಗಳನ್ನು ಮಾಡಿ ಮಧ್ಯ ಕ್ರಮದಲ್ಲಿ ಭಾರತಕ್ಕೆ ಆಧಾರ ನೀಡಿದರು. ರಿಚಾ ಘೋಷ್ ಕೊನೆಯ ಹಂತದಲ್ಲಿ ಎರಡು ಸಿಕ್ಸ್‌ಗಳನ್ನು ಹೊಡೆದು ವೇಗದ 34 ರನ್‌ಗಳನ್ನು ಕಲೆಹಾಕಿದರು.

ಬೌಲಿಂಗ್ ವಿಭಾಗದಲ್ಲಿ ದೀಪ್ತಿ ಶರ್ಮಾ ಮತ್ತೆ ಮಿಂಚಿ 5 ವಿಕೆಟ್ ಪಡೆದು (5/39) ಪಂದ್ಯವನ್ನು ಭಾರತ ಪರ ತಿರುಗಿಸಿದರು. ದಕ್ಷಿಣ ಆಫ್ರಿಕಾ ಬ್ಯಾಟಿಂಗ್‌ನಲ್ಲಿ ನಾಯಕಿ ಲೋರಾ ವಾಲ್‌ವಾರ್ಡ್ ಮಾತ್ರ ಹೋರಾಡಿ 98 ಬಾಲ್ ಗಳಲ್ಲಿ 101 ರನ್ ಗಳಿಸಿದರೂ, ಉಳಿದವರು ನಿರಾಶೆಗೊಳಿಸಿದರು. ಅವರು 46ನೇ ಓವರಿನಲ್ಲಿ 246 ರನ್‌ಗಳಿಗೆ ಆಲ್ ಔಟ್ ಆದರು.

ಈ ಗೆಲುವು ಭಾರತದ ಮಹಿಳಾ ತಂಡಕ್ಕೆ ಅತ್ಯಂತ ಸ್ಮರಣೀಯ ಕ್ಷಣ. 2005 ಮತ್ತು 2017 ರಲ್ಲಿ ಫೈನಲ್ ತಲುಪಿದ್ದರೂ ಭಾರತ ಗೆಲುವು ಕಾಣಲಿಲ್ಲ. ಈ ಬಾರಿ ಹರ್ಮನ್‌ಪ್ರೀತ್ ಕೌರ್‌ ಅವರ ನಾಯಕತ್ವದಲ್ಲಿ ತಂಡವು ಅದನ್ನು ಸಾಧಿಸಿದೆ.

ಇದು ಇತಿಹಾಸದಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾ ಅಥವಾ ಇಂಗ್ಲೆಂಡ್ ಭಾಗವಹಿಸದ ಮಹಿಳಾ ವಿಶ್ವಕಪ್ ಫೈನಲ್ ಆಗಿತ್ತು. ಭಾರತವು 298 ರನ್‌ಗಳ ಮೂಲಕ ವಿಶ್ವಕಪ್ ಫೈನಲ್‌ನಲ್ಲಿ ಎರಡನೇ ಅತಿ ಹೆಚ್ಚು ಮೊತ್ತ ದಾಖಲಿಸಿದೆ.

ಅಂತರಾಷ್ಟ್ರೀಯ ಕ್ರೀಡೆ ರಾಷ್ಟ್ರೀಯ