ಐಸಿಸಿ ಮಹಿಳಾ ವಿಶ್ವಕಪ್ 2025ರ ಎರಡನೇ ಸೆಮಿಫೈನಲ್‌ನಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಅಜೇಯ ಪ್ರದರ್ಶನ ತೋರಿಸಿ ಆಸ್ಟ್ರೇಲಿಯಾವನ್ನು 5 ವಿಕೆಟ್‌ಗಳಿಂದ ಮಣಿಸಿ ಫೈನಲ್‌ಗೆ ಪ್ರವೇಶಿಸಿದೆ. ನವಿಮುಂಬೈ ಕ್ರೀಡಾಂಗಣದಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ ಜೇಮಿಮಾ ರೋಡ್ರಿಗ್ಸ್ ಅವರ ಅದ್ಭುತ ಶತಕ ಭಾರತ ಗೆಲುವಿನ ಪ್ರಮುಖ ಆಧಾರವಾಯಿತು.

ಟಾಸ್ ಗೆದ್ದು ಆಸ್ಟ್ರೇಲಿಯಾ ಮಹಿಳಾ ತಂಡ ಮೊದಲು ಬ್ಯಾಟಿಂಗ್ ಮಾಡಿ 49.5 ಓವರ್‌ಗಳಲ್ಲಿ 338 ರನ್ ಗಳಿಸಿತು.ಓಪನರ್ ಅಲಿಸ್ಸಾ ಹೀಲಿ ಕೇವಲ 5 ರನ್‌ಗಳಲ್ಲೇ ಔಟಾದರು. ಆದರೆ ಯುವ ಬ್ಯಾಟರ್ ಫೋಬೆ ಲಿಚ್‌ಫೀಲ್ಡ್ ಅದ್ಭುತ ಶತಕ (119) ಬಾರಿಸಿ ತಂಡವನ್ನು ಸ್ಥಿರಗೊಳಿಸಿದರು. ಅವರ ಜೊತೆಗೆ ಎಲ್ಲಿಸ್ ಪೆರ್ರಿ (77) ಮತ್ತು ಅಶ್ಲೀಘ್ ಗಾರ್ಡ್ನರ್ (63) ಉತ್ತಮ ಇನಿಂಗ್ಸ್‌ಗಳನ್ನು ಆಡಿದರು. ಇವರ ಸಿಡಿಲಾಟದಿಂದ ಆಸೀಸ್ ತಂಡ 49.5 ಓವರ್‌ಗಳಲ್ಲಿ ಬೃಹತ್ 338 ರನ್‌ಗಳನ್ನು ಕಲೆಹಾಕಿತು.
ಆದರೆ ಭಾರತೀಯ ಮಹಿಳಾ ತಂಡದ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮುಂದೆ ಆ ಅಂಕೆ ಸಾಕಾಗಲಿಲ್ಲ. ಭಾರತ 48.3 ಓವರ್‌ಗಳಲ್ಲಿ 341 ರನ್ ಕಲೆ ಹಾಕಿ 5 ವಿಕೆಟ್‌ಗಳಿಂದ ಪಂದ್ಯವನ್ನು ತಮ್ಮದಾಗಿಸಿಕೊಂಡಿತು.

ಗುರಿ ಬೆನ್ನಟ್ಟಲು ಬಂದ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಓಪನರ್‌ಗಳು ಶೆಫಾಲಿ ವರ್ಮಾ (10) ಮತ್ತು ಸ್ಮೃತಿ ಮಂದಾನಾ (24) 10 ಓವರ್‌ಗಳೊಳಗೆ ಪೆವಿಲಿಯನ್ ಸೇರುವಂತಾಯಿತು. ಕೇವಲ 59 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡವನ್ನು ಹರ್ಮನ್‌ಪ್ರೀತ್ ಕೌರ್ ಮತ್ತು ಜೆಮಿಮಾ ರೊಡ್ರಿಗಸ್ ಅದ್ಭುತವಾದ ಜೊತೆಯಾಟ ನೀಡಿದರು.ಇಬ್ಬರ ನಡುವೆ ಶತಕದ ಜೊತೆಯಾಟ ನಿರ್ಮಾಣವಾಗಿ ಪಂದ್ಯ ಭಾರತ ಪರ ತಿರುಗಿತು. ನಾಯಕಿ ಹರ್ಮನ್‌ಪ್ರೀತ್ ಶತಕದ ಅಂಚಿನಲ್ಲೇ (89) ಔಟಾದರೂ, ಜೆಮಿಮಾ ಬಲಿಷ್ಠ ಬ್ಯಾಟಿಂಗ್ ಮುಂದುವರಿಸಿ (127* ರನ್) ಅಜೇಯರಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಕೊನೆಯಲ್ಲಿ ದೀಪ್ತಿ ಶರ್ಮಾ (28*) ಸಹಕಾರ ನೀಡಿದ್ದು, ಭಾರತ 48.3 ಓವರ್‌ಗಳಲ್ಲಿ ಗುರಿ ಮುಟ್ಟಿತು.
ಆಸ್ಟ್ರೇಲಿಯಾವನ್ನು ಮಣಿಸಿದ ಬಳಿಕ ಟೀಂ ಇಂಡಿಯಾ ಇದೀಗ ನವೆಂಬರ್ 2, 2025ರಂದು ನಡೆಯಲಿರುವ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಮಹಿಳಾ ತಂಡವನ್ನು ಎದುರಿಸಲಿದೆ. ಇದೇ ನವಿ ಮುಂಬೈನ ಡಾ. ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಮೈದಾನದಲ್ಲೇ ಈ ಮಹತ್ವದ ಪೈಪೋಟಿ ನಡೆಯಲಿದ್ದು, ಯಾವ ತಂಡ ಗೆದ್ದರೂ ಹೊಸ ವಿಶ್ವಚಾಂಪಿಯನ್ ಸಿಗಲಿದೆ.


 
                                