ಹಾಸನ, ಅಕ್ಟೋಬರ್ 23: ಹಾಸನಾಂಬ ದೇವಿಯ ವಾರ್ಷಿಕ ಉತ್ಸವದ ಅಂತಿಮ ದಿನವಾದ ಇಂದು, ಸಿದ್ದೇಶ್ವರ ಸ್ವಾಮಿ ಕೆಂಡೋತ್ಸವದ ವೇಳೆ ಭಕ್ತಿಭಾವದ ಅಪರೂಪದ ದೃಶ್ಯಗಳು ಕಂಡುಬಂದವು. ಜಿಲ್ಲಾಧಿಕಾರಿ ಲತಾಕುಮಾರಿ ಅವರು ನೂರಾರು ಭಕ್ತರ ಜೊತೆಗೆ ಕೆಂಡದ ಮೇಲೆ ಹಾಯ್ದು ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದರು.

13 ದಿನಗಳ ಕಾಲ ನಡೆದ ಈ ಹಾಸನಾಂಬ ಉತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಿದ್ದು , ಈ ಬಾರಿ ದೇಗುಲದ ಆದಾಯವು ಸುಮಾರು ₹25 ಕೋಟಿಯ ಮಟ್ಟಿಗೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರ್ಷದಲ್ಲಿ ಒಮ್ಮೆ 13 ದಿನಗಳ ಕಾಲ ಮಾತ್ರ ತೆರೆಯಲ್ಪಡುವ ಹಾಸನಾಂಬ ದೇವಿಯ ದೇವಸ್ಥಾನದ ಗರ್ಭಗುಡಿ ದ್ವಾರ
ಇಂದು ಮಧ್ಯಾಹ್ನ 12 ಗಂಟೆಗೆ ಮುಚ್ಚಲಾಗುತ್ತದೆ.
ಸಾಂಪ್ರದಾಯಿಕ ಉತ್ಸವದ ಕೊನೆಯ ಹಂತವಾಗಿರುವ ಸಿದ್ದೇಶ್ವರ ಸ್ವಾಮಿ ಕೆಂಡೋತ್ಸವವು, ಶ್ರದ್ಧಾಭಕ್ತಿಯಿಂದ ಜನಸಾಗರದ ಮಧ್ಯೆ ನಡೆಯಿತು. ಮಹಿಳೆಯರಿಂದ ಮಕ್ಕಳವರೆಗೆ ನೂರಾರು ಮಂದಿ ಕೆಂಡದ ಮೇಲೆ ಹಾಯ್ದು ದೇವರಿಗೆ ಶ್ರದ್ಧಾ ಭಕ್ತಿ ಸಮರ್ಪಣೆ ಸಲ್ಲಿಸಿದರು.
ಭಕ್ತರ ಜೊತೆಗೂಡಿ ಕೆಂಡದ ಮೇಲೆ ಹಾಯ್ದು ಭಕ್ತಿ ಮೆರೆದ ಜಿಲ್ಲಾ ಆಡಳಿತಾಧಿಕಾರಿ ಲತಾಕುಮಾರಿ ಅವರ ಧೈರ್ಯ ಮತ್ತು ನಂಬಿಕೆ ಜನರ ಗಮನ ಸೆಳೆಯಿತು. ಈ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದ್ದು, ಅನೇಕರು ಅವರ ಭಕ್ತಿಭಾವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

