ನಿವೃತ್ತ ಸೈನಿಕರ ಕಲ್ಯಾಣಕ್ಕೆ ಮತ್ತೊಂದು ಹೆಜ್ಜೆ: ಸಹಾಯಧನ ದ್ವಿಗುಣ – ರಾಜನಾಥ್ ಸಿಂಗ್ ಅನುಮೋದನೆ

ನಿವೃತ್ತ ಸೈನಿಕರ ಕಲ್ಯಾಣಕ್ಕೆ ಮತ್ತೊಂದು ಹೆಜ್ಜೆ: ಸಹಾಯಧನ ದ್ವಿಗುಣ – ರಾಜನಾಥ್ ಸಿಂಗ್ ಅನುಮೋದನೆ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನಿವೃತ್ತ ಸೈನಿಕರು ಮತ್ತು ಅವರ ಅವಲಂಬಿತರ ಕಲ್ಯಾಣಕ್ಕಾಗಿ ನೀಡಲಾಗುತ್ತಿದ್ದ ಆರ್ಥಿಕ ಸಹಾಯಧನವನ್ನು ಶೇ.100 ರಷ್ಟು ಹೆಚ್ಚಿಸಲು ಅನುಮೋದಿಸಿದ್ದಾರೆ. ಈ ನಿರ್ಧಾರದಿಂದ ಸಾವಿರಾರು ಸೈನಿಕ ಕುಟುಂಬಗಳಿಗೆ ಹೊಸ ಭರವಸೆ ದೊರೆಯಲಿದೆ.

ರಕ್ಷಣಾ ಸಚಿವಾಲಯದ ಪ್ರಕಾರ, ಪೆನೂರಿ ಗ್ರಾಂಟ್ ಅಂದರೆ ತೀವ್ರ ಬಡತನದಲ್ಲಿರುವ ನಿವೃತ್ತ ಸೈನಿಕರು ಹಾಗು ವಿಧವೆಯರಿಗೆ ನೀಡುವ ಮಾಸಿಕ ಸಹಾಯಧನವನ್ನು ರೂ.4,000 ರಿಂದ ರೂ.8,000ಕ್ಕೆ ಏರಿಸಲಾಗಿದೆ. ಈ ಯೋಜನೆಯಿಂದ 65 ವರ್ಷಕ್ಕಿಂತ ಮೇಲ್ಪಟ್ಟ, ನಿವೃತ್ತಿ ವೇತನವಿಲ್ಲದ ಸೈನಿಕರು ಮತ್ತು ಅವರ ವಿಧವೆಯರಿಗೆ ಜೀವನಪೂರ್ತಿ ಆರ್ಥಿಕ ನೆರವು ದೊರೆಯಲಿದೆ.

ಇದೇ ವೇಳೆ, ಮಕ್ಕಳ ಶಿಕ್ಷಣ ಧನವನ್ನು ಪ್ರತಿ ಮಗುವಿಗೆ ರೂ.1,000 ರಿಂದ ರೂ.2,000ಕ್ಕೆ ಹೆಚ್ಚಿಸಲಾಗಿದೆ (ಎರಡು ಮಕ್ಕಳವರೆಗೆ). ಮದುವೆ ಧನ ಸಹಾಯಧನವನ್ನು ಕೂಡ ರೂ.50,000 ರಿಂದ ರೂ.1 ಲಕ್ಷಕ್ಕೆ ಏರಿಸಲಾಗಿದೆ.

ಈ ಪರಿಷ್ಕೃತ ದರಗಳು ನವೆಂಬರ್ 1ರಿಂದ ಸಲ್ಲಿಸಲಾದ ಅರ್ಜಿಗಳಿಗೆ ಅನ್ವಯಿಸಲಿವೆ. ಇದರ ವಾರ್ಷಿಕ ಹಣಕಾಸು ಪರಿಣಾಮವು ಸುಮಾರು ರೂ.257 ಕೋಟಿ ಆಗಲಿದೆ ಎಂದು ಸಚಿವಾಲಯ ತಿಳಿಸಿದೆ.

ಈ ಯೋಜನೆಗಳಿಗೆ ಹಣಕಾಸು ರಕ್ಷಣಾ ಮಂತ್ರಿ ಎಕ್ಸ್-ಸರ್ವಿಸ್ಮನ್ ವೆಲ್ಫೇರ್ ಫಂಡ್ ಮೂಲಕ ಒದಗಿಸಲಾಗುತ್ತದೆ, ಇದು ಆರ್ಮ್ಡ್ ಫೋರ್ಸಸ್ ಫ್ಲ್ಯಾಗ್ ಡೇ ಫಂಡ್ ನ ಭಾಗವಾಗಿದೆ.

ಈ ನಿರ್ಧಾರದಿಂದ ನಿವೃತ್ತ ಸೈನಿಕರು ಹಾಗೂ ಅವರ ಕುಟುಂಬಗಳ ಸಾಮಾಜಿಕ ಭದ್ರತೆಯು ಇನ್ನಷ್ಟು ಬಲವಾಗಲಿದೆ.

ರಾಷ್ಟ್ರೀಯ