ಬಿಲಾಸ್ಪುರ (ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದ ಬಿಲಾಸ್ಪುರ ಜಿಲ್ಲೆಯ ಝಂಡೂಟಾ ತಾಲೂಕಿನ ಭಲ್ಲು ಪುಲ್ ಹತ್ತಿರ ಭೀಕರ ಬಸ್ ದುರಂತ ಸಂಭವಿಸಿದ್ದು, 15 ಮಂದಿ ದುರ್ಮರಣ ಹೊಂದಿದ್ದಾರೆ. ಇಬ್ಬರು ಗಾಯಗೊಂಡಿದ್ದು, ಒಂದು ಮಗು ಇನ್ನೂ ಕಾಣೆಯಾಗಿರುವ ಭೀತಿ ವ್ಯಕ್ತವಾಗಿದೆ. ಮಳೆಯಿಂದಾದ ತೊಂದರೆಯ ನಡುವೆಯೂ ರಕ್ಷಣಾ ಕಾರ್ಯಗಳು ಮುಂದುವರಿಯುತ್ತಿವೆ.

ಖಾಸಗಿ ಬಸ್ ಒಂದು ಪರ್ವತದಿಂದ ಜಾರಿದ ಭಾರೀ ಕಲ್ಲುಗಳು ಹಾಗೂ ಮಣ್ಣಿನ ಅವಶೇಷಗಳಡಿ ಸಂಪೂರ್ಣವಾಗಿ ಮುಚ್ಚಿಕೊಂಡು ಹೋಗಿದೆ. ಈ ದುರಂತದಲ್ಲಿ ಚಾಲಕ ಹಾಗೂ ಕಂಡಕ್ಟರ್ ಸೇರಿ 15 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆಯ ಸಮಯದಲ್ಲಿ ಬಸ್ಸಿನಲ್ಲಿ ಸುಮಾರು 17 ಮಂದಿ ಪ್ರಯಾಣಿಕರಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ಸಿಬ್ಬಂದಿಗಳು ಇಬ್ಬರು ಮಕ್ಕಳನ್ನು ಜೀವಂತವಾಗಿ ರಕ್ಷಿಸಿದ್ದು, ಅವರನ್ನು ಬಿಲಾಸ್ಪುರದ ಎಐಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಂಟು ವರ್ಷದ ಒಂದು ಮಗು ಇನ್ನೂ ಕಾಣೆಯಾಗಿರುವ ಬಗ್ಗೆ ಆತಂಕ ವ್ಯಕ್ತವಾಗಿದೆ.
ಈ ನಡುವೆ, ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಈ ದುರಂತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಅವರು ತಮ್ಮ ದುಃಖವನ್ನು ಹಂಚಿಕೊಂಡು, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ ಹಾಗೂ ಗಾಯಗೊಂಡವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿದ್ದಾರೆ.

