ನಾಲ್ಕು ಹೊಸ ವಿಸಿಟ್ ವೀಸಾಗಳನ್ನು ಪರಿಚಯಿಸಿದ ಯುಎಇ

ನಾಲ್ಕು ಹೊಸ ವಿಸಿಟ್ ವೀಸಾಗಳನ್ನು ಪರಿಚಯಿಸಿದ ಯುಎಇ

ಸಂಯುಕ್ತ ಅರಬ್ ಎಮಿರೇಟ್ಸ್‌ (ಯುಎಇ) ವಿದೇಶಿ ತಜ್ಞರು, ಉದ್ಯಮಿಗಳು ಹಾಗೂ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ನಾಲ್ಕು ಹೊಸ ವೀಸಾ ವಿಭಾಗಗಳನ್ನು ಪರಿಚಯಿಸಿದೆ. ಕೃತಕ ಬುದ್ಧಿಮತ್ತೆ (AI), ಮನರಂಜನೆ, ಈವೆಂಟ್ಸ್ ಹಾಗೂ ಕ್ರೂಸ್ ಹಡಗು–ಮೋಜಿನ ದೋಣಿಗಳ ಮೂಲಕ ಪ್ರವಾಸೋದ್ಯಮ ವೀಸಾಗಳನ್ನು ಇತ್ತೀಚೆಗೆ ಘೋಷಿಸಲಾಗಿದೆ.

ಈ ಹೊಸ ನಿಯಮಗಳು ಯುಎಇಯ ಮುಕ್ತ ನೀತಿಯನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ ಜಗತ್ತಿನಾದ್ಯಂತದಿಂದ ಪ್ರತಿಭೆ, ತಂತ್ರಜ್ಞಾನ ತಜ್ಞರು, ಹೂಡಿಕೆದಾರರು ಮತ್ತು ಪ್ರವಾಸಿಗರನ್ನು ಸೆಳೆಯುವ ಗುರಿ ಹೊಂದಿವೆ.

ಪ್ರಮುಖ ನಾಲ್ಕು ವೀಸಾ ವಿಭಾಗಗಳು

ಕೃತಕ ಬುದ್ಧಿಮತ್ತೆ (AI) ಸ್ಪೆಷಲಿಸ್ಟ್ ವೀಸಾ: ತಂತ್ರಜ್ಞಾನ ಕ್ಷೇತ್ರದ ಸಂಸ್ಥೆಯಿಂದ ಶಿಫಾರಸು ಪತ್ರದ ಆಧಾರದ ಮೇಲೆ ನಿರ್ದಿಷ್ಟ ಅವಧಿಗೆ ಸಿಂಗಲ್ ಅಥವಾ ಮಲ್ಟಿಪಲ್ ಎಂಟ್ರಿ ವೀಸಾ.

ಎಂಟರ್‌ಟೈನ್‌ಮೆಂಟ್ ವೀಸಾ: ಮನರಂಜನಾ ಉದ್ದೇಶಕ್ಕಾಗಿ ತಾತ್ಕಾಲಿಕವಾಗಿ ಬರುವ ವಿದೇಶಿಗರಿಗೆ ನೀಡುವ ವೀಸಾ.

ಈವೆಂಟ್ಸ್ ವೀಸಾ: ಸಮ್ಮೇಳನ, ಪ್ರದರ್ಶನ, ಉತ್ಸವ, ಕ್ರೀಡೆ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬರುವವರಿಗೆ ನೀಡುವ ವೀಸಾ. ಇದು ಸಾರ್ವಜನಿಕ ಅಥವಾ ಖಾಸಗಿ ಸಂಸ್ಥೆಯ ಆತಿಥ್ಯ ಪತ್ರ ಅಗತ್ಯವಾಗಿರುತ್ತದೆ.

ಟೂರಿಸಂ ವೀಸಾ: ಕ್ರೂಸ್ ಹಡಗು ಮತ್ತು ಮೋಜಿನ ದೋಣಿಗಳ ಮೂಲಕ ಪ್ರವಾಸಿಗರಿಗೆ ಮಲ್ಟಿಪಲ್ ಎಂಟ್ರಿ ವೀಸಾ. ಲೈಸೆನ್ಸ್ ಹೊಂದಿದ ಪ್ರವಾಸೋದ್ಯಮ ಸಂಸ್ಥೆಯ ಪ್ರಾಯೋಜಕತ್ವ ಕಡ್ಡಾಯ.

ಇತರ ಪ್ರಮುಖ ತಿದ್ದುಪಡಿ

ವಿಧವಾ ಅಥವಾ ವಿಚ್ಛೇದಿತ ಮಹಿಳೆಗೆ ಒಂದು ವರ್ಷದ ವಾಸ ಅನುಮತಿ, ನವೀಕರಣದ ಅವಕಾಶ ಸಹಿತ.

ಆಪ್ತ ಸಂಬಂಧಿಕರ (ಮೂರನೇ ತಲೆಮಾರುತನಕ) ಭೇಟಿಗಾಗಿ ಸ್ನೇಹಿತ/ಕುಟುಂಬ ವೀಸಾ.

ಉದ್ಯಮ ಅನ್ವೇಷಣೆ ವೀಸಾ ಪಡೆಯಲು ಆರ್ಥಿಕ ಸಾಮರ್ಥ್ಯ ಅಥವಾ ವಿದೇಶದಲ್ಲಿ ಕಂಪನಿ ಹಂಚಿಕೆ ಹೊಂದಿರುವುದು ಕಡ್ಡಾಯ.

ಟ್ರಕ್ ಚಾಲಕರಿಗೆ ಸ್ಪಾನ್ಸರ್ ಹಾಗೂ ಆರೋಗ್ಯ–ಆರ್ಥಿಕ ಭದ್ರತೆ ಕಡ್ಡಾಯ.

ಯುದ್ಧ, ವಿಪತ್ತು ಅಥವಾ ಅಶಾಂತಿಯಿರುವ ದೇಶಗಳ ನಾಗರಿಕರಿಗೆ ಮಾನವೀಯ ವಾಸ ಅನುಮತಿ ಒಂದು ವರ್ಷದ ಅವಧಿಗೆ, ವಿಸ್ತರಣೆ ಸೌಲಭ್ಯ ಸಹಿತ.

ಈ ಮೂಲಕ ಯುಎಇ ತನ್ನನ್ನು ತಂತ್ರಜ್ಞಾನ, ಮನರಂಜನೆ ಹಾಗೂ ಪ್ರವಾಸೋದ್ಯಮದ ಜಾಗತಿಕ ಕೇಂದ್ರವನ್ನಾಗಿ ಮತ್ತಷ್ಟು ಬಲಪಡಿಸಲು ಮುಂದಾಗಿದೆ.

ಅಂತರಾಷ್ಟ್ರೀಯ