ಹಿರಿಯ ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ನಿಧನ

ಹಿರಿಯ ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ನಿಧನ

ಬೆಂಗಳೂರು: ಕನ್ನಡ ರಂಗಭೂಮಿ ಲೋಕದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದ ಹಿರಿಯ ನಟ ಹಾಗೂ ನಿರ್ದೇಶಕ ಯಶವಂತ ಸರದೇಶಪಾಂಡೆ ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ಅಗಲಿದ್ದಾರೆ.

ಅವರಿಗೆ 60 ವರ್ಷ ವಯಸ್ಸಾಗಿತ್ತು.ಬೆಳಿಗ್ಗೆ ಸುಮಾರು 10 ಗಂಟೆ ವೇಳೆಗೆ ಅವರಿಗೆ ತೀವ್ರ ಹೃದಯಾಘಾತ ಉಂಟಾಗಿದ್ದು, ತಕ್ಷಣವೇ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದರು.

ಯಶವಂತ ಸರದೇಶಪಾಂಡೆ ಅವರು ರಾಜ್ಯಾದ್ಯಂತ ಅನೇಕ ನಾಟಕಗಳನ್ನು ನಿರ್ದೇಶಿಸಿ ಹಾಗೂ ಅಭಿನಯಿಸಿ ಪ್ರೇಕ್ಷಕರ ಮನಗೆದ್ದಿದ್ದರು. ವಿಶೇಷವಾಗಿ ‘ಆಲ್ ದಿ ಬೆಸ್ಟ್’ ನಾಟಕ ಅಪಾರ ಯಶಸ್ಸು ಗಳಿಸಿತ್ತು. ಹಾಸ್ಯಭರಿತ ನಾಟಕಗಳ ಮೂಲಕ ಮನೆಮಾತಾದ ಅವರು, ಧಾರಾವಾಹಿ ಮತ್ತು ಚಲನಚಿತ್ರಗಳಲ್ಲಿಯೂ ಗಮನಾರ್ಹ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ‘ರಾಮ ಶ್ಯಾಮ ಭಾಮಾ’ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರ ಅಭಿನಯ ಪ್ರೇಕ್ಷಕರ ಮೆಚ್ಚುಗೆ ಪಡೆದಿತ್ತು.

ಅವರ ನಿಧನಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ. ರಂಗಭೂಮಿ, ಕಿರುತೆರೆ ಹಾಗೂ ಚಲನಚಿತ್ರ ಲೋಕದಲ್ಲಿ ಹಾಸ್ಯದ ಮೂಲಕ ಜನಮನ ಗೆದ್ದ ಯಶವಂತ ಸರದೇಶಪಾಂಡೆ ಅವರ ನೆನಪು ಸದಾ ಜೀವಂತವಾಗಿಯೇ ಉಳಿಯಲಿದೆ.

ಮನೋರಂಜನೆ ರಾಜ್ಯ