
ನವದೆಹಲಿ: ಭಾರತವು ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2025 ಅನ್ನು ಅಧಿಕೃತವಾಗಿ ಉದ್ಘಾಟಿಸಿದೆ. ಇದು ದೇಶದ ಅತಿದೊಡ್ಡ ಪ್ಯಾರಾ ಕ್ರೀಡಾಕೂಟವಾಗಿದೆ. ಪಂದ್ಯಾವಳಿಯು ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 5 ರವರೆಗೆ ನಡೆಯಲಿದ್ದು, ವಿಶ್ವದ ಅತ್ಯುತ್ತಮ ಪ್ಯಾರಾ-ಅಥ್ಲೀಟ್‌ಗಳನ್ನು ಒಟ್ಟುಗೂಡಿಸುತ್ತದೆ.

12 ನೇ ಆವೃತ್ತಿಯ ಚಾಂಪಿಯನ್‌ಶಿಪ್‌ನಲ್ಲಿ 104 ದೇಶಗಳಿಂದ 2,200 ಕ್ಕೂ ಹೆಚ್ಚು ಕ್ರೀಡಾಪಟುಗಳು ಮತ್ತು ಸಹಾಯಕ ಸಿಬ್ಬಂದಿಗಳು ಭಾಗವಹಿಸಲಿದ್ದಾರೆ. ಈ ವರ್ಷದ ಕಾರ್ಯಕ್ರಮವು ಈವರೆಗೆ ನಡೆದ ಕಾರ್ಯಕ್ರಮಗಳಲ್ಲೇ ಅತ್ಯಂತ ದೊಡ್ಡದಾಗಿದ್ದು, ಪುರುಷರಿಗೆ 101, ಮಹಿಳೆಯರಿಗೆ 84 ಮತ್ತು ಮಿಶ್ರ ರಿಲೇ ಸೇರಿದಂತೆ, ಒಟ್ಟು 186 ಪದಕ – ಗೆಲ್ಲುವ ಸ್ಪರ್ಧೆಗಳನ್ನು ಒಳಗೊಂಡಿದೆ. ಕೋಬೆಯಲ್ಲಿ ನಡೆದ ಹಿಂದಿನ ಆವೃತ್ತಿಗೆ ಹೋಲಿಸಿದರೆ, 15 ಸ್ಪರ್ಧೆಗಳು ಹೆಚ್ಚಾಗಿವೆ.
ಈ ಜಾಗತಿಕ ಕೂಟಕ್ಕಾಗಿ ಜವಾಹರಲಾಲ್ ನೆಹರು ಕ್ರೀಡಾಂಗಣ ಸಂಪೂರ್ಣವಾಗಿ ನವೀಕರಣಗೊಂಡಿದೆ. ಇಲ್ಲಿ ಹೊಸ ಮೊಂಡೊ ಸ್ಪರ್ಧಾ ಟ್ರ್ಯಾಕ್ ಹಾಗೂ ಪ್ಯಾರಿಸ್ 2024 ಪ್ಯಾರಾಲಿಂಪಿಕ್ಸ್‌ನಲ್ಲಿ ಬಳಸಿದ ಮಟ್ಟದ ಮೊಂಡೊ ವಾರ್ಮ್-ಅಪ್ ಟ್ರ್ಯಾಕ್ ಅಳವಡಿಸಲಾಗಿದೆ. ಜೊತೆಗೆ ಪ್ಯಾರಾ ಸ್ನೇಹಿ ಜಿಮ್, ಹೊಸ ಲಾಂಗ್‌ಜಂಪ್ ಪಿಟ್ಗಳು ಹಾಗೂ ಸುಧಾರಿತ ಸೌಲಭ್ಯಗಳನ್ನು ಸಿದ್ಧಪಡಿಸಲಾಗಿದೆ. ಭಾರತೀಯ ಸಂಸ್ಕೃತಿ, ಪ್ಯಾರಾ ಅಥ್ಲೀಟ್‌ಗಳ ಚಿತ್ರಣ, ಕಮಲ ಹೂವಿನ ವಿನ್ಯಾಸ ಹಾಗೂ ಬ್ರೈಲ್ ಲಿಪಿಯನ್ನು ಒಳಗೊಂಡ ವಿಶೇಷ ಪದಕಗಳನ್ನು ಕೂಡ ಅನಾವರಣಗೊಳಿಸಲಾಯಿತು.

ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾತನಾಡಿ, “ನಮ್ಮ ಪ್ಯಾರಾ ಅಥ್ಲೀಟ್‌ಗಳು ಲಕ್ಷಾಂತರ ಜನರಿಗೆ ಪ್ರೇರಣೆಯ ಮೂಲ. ಈ ಕೂಟವನ್ನು ಆತಿಥ್ಯ ನೀಡುತ್ತಿರುವುದು ಭಾರತವನ್ನು ಜಾಗತಿಕ ಕ್ರೀಡಾ ಕೇಂದ್ರವಾಗಿಸುವ ನಮ್ಮ ಪ್ರಯಾಣವನ್ನು ಪ್ರತಿಬಿಂಬಿಸುತ್ತದೆ ಮತ್ತು ಸಮಾವೇಶಿತ ಹಾಗೂ ಆತ್ಮನಿರ್ಭರ ಭಾರತದ ದೃಷ್ಟಿಯನ್ನು ಬಲಪಡಿಸುತ್ತದೆ” ಎಂದು ಹೇಳಿದರು.
2024ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ 29 ಪದಕಗಳನ್ನು ಗೆದ್ದು ಭಾರತ ತನ್ನ ಶ್ರೇಷ್ಠ ಸಾಧನೆಯನ್ನು ದಾಖಲಿಸಿದ್ದರಿಂದ, ಈ ಬಾರಿ ಸ್ವದೇಶದಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಗಳು ಹೆಚ್ಚಿವೆ.
ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಅಧ್ಯಕ್ಷರಾದ ಪಾಲ್ ಫಿಟ್ಜ್‌ಜೆರಾಲ್ಡ್, ಭಾರತದ ಸಿದ್ಧತೆಗಳನ್ನು ಮನಸಾರೆ ಮೆಚ್ಚಿಕೊಂಡಿದ್ದಾರೆ. “ಮೊಂಡೊ ಟ್ರ್ಯಾಕ್ ಮತ್ತು ಅಥ್ಲೀಟ್ ಸ್ನೇಹಿ ಸೌಲಭ್ಯಗಳಲ್ಲಿ ಹೂಡಿಕೆ ಮಾಡಿರುವುದು, ಈ ಚಾಂಪಿಯನ್‌ಶಿಪ್‌ಗಳಷ್ಟೇ ಅಲ್ಲದೆ ಭಾರತದಲ್ಲಿ ಪ್ಯಾರಾ ಕ್ರೀಡೆಗಳ ಭವಿಷ್ಯಕ್ಕೂ ಮಹತ್ವದ ಹೆಜ್ಜೆ” ಎಂದು ಹೇಳಿದರು.

ವಿಶ್ವದ ಶ್ರೇಷ್ಠ ಪ್ಯಾರಾ ಅಥ್ಲೀಟ್‌ಗಳು ಕೀರ್ತಿಗಾಗಿ ಸ್ಪರ್ಧಿಸುತ್ತಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2025 ಕ್ರೀಡೆ, ಸಮಾವೇಶ ಮತ್ತು ಭಾರತದ ಜಾಗತಿಕ ಕ್ರೀಡಾ ಸ್ಥಾನಮಾನಕ್ಕೆ ಮಹತ್ವದ ಘಟ್ಟವಾಗಲಿದೆ.
