ಪಂಚಭೂತಗಳಲ್ಲಿ ಲೀನರಾದ ಅಕ್ಷರ ಮಾಂತ್ರಿಕ – ಡಾ.ಎಸ್ ಎಲ್ ಭೈರಪ್ಪ

ಪಂಚಭೂತಗಳಲ್ಲಿ ಲೀನರಾದ ಅಕ್ಷರ ಮಾಂತ್ರಿಕ – ಡಾ.ಎಸ್ ಎಲ್ ಭೈರಪ್ಪ

ಮೈಸೂರು: ಕನ್ನಡ ಸಾಹಿತ್ಯ ಲೋಕದ ಶ್ರೇಷ್ಠ ಕಾದಂಬರಿಕಾರರಾದ ಡಾ. ಎಸ್.ಎಲ್. ಭೈರಪ್ಪರ ಅಂತ್ಯ ಸಂಸ್ಕಾರವು ಶುಕ್ರವಾರ ಮಧ್ಯಾಹ್ನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ರುದ್ರಭೂಮಿಯಲ್ಲಿ ಸರ್ಕಾರಿ ಗೌರವದೊಂದಿಗೆ ನೆರವೇರಿತು.

ಬೆಳಗ್ಗೆಯಿಂದಲೇ ಭೈರಪ್ಪರ ಮೈಸೂರು ನಿವಾಸದಲ್ಲಿ ಕುಟುಂಬಸ್ಥರು, ಅಭಿಮಾನಿಗಳು ಮತ್ತು ಸಾಹಿತ್ಯಾಸಕ್ತರು ಸೇರಿ ಅಂತಿಮ ನಮನ ಸಲ್ಲಿಸಿದರು. ಬಳಿಕ ಪಾರ್ಥೀವ ಶರೀರವನ್ನು ಚಾಮುಂಡಿ ಬೆಟ್ಟದ ತಪ್ಪಲಿನ ರುದ್ರಭೂಮಿಗೆ ಕರೆತರಲಾಯಿತು. ಅಲ್ಲಿ ಪುತ್ರರಾದ ರವಿಶಂಕರ್, ಉದಯ್ ಶಂಕರ್ ಹಾಗೂ ಸಹನಾ ವಿಜಯ್‌ಕುಮಾರ್‌ ಭೈರಪ್ಪರ ಚಿತೆಗೆ ಅಗ್ನಿ ಸ್ಪರ್ಶಿಸಿದರು. ಬ್ರಾಹ್ಮಣ ಸಂಪ್ರದಾಯದಂತೆ ವಿಧಿವಿಧಾನ ನೆರವೇರಿತು.

ಅಂತಿಮ ಕ್ಷಣದಲ್ಲಿ ಪತ್ನಿ ಸರಸ್ವತಿ, ಕುಟುಂಬಸ್ಥರು, ಶಿಷ್ಯರು ಹಾಗೂ ಅಭಿಮಾನಿಗಳು ಹಾಜರಿದ್ದು ಕಣ್ಣೀರಿನ ವಿದಾಯ ಸಲ್ಲಿಸಿದರು. ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಸಚಿವ ಮಹದೇವಪ್ಪ, ಸಂಸದ ಪ್ರತಾಪ್‌ ಸಿಂಹ, ಶಾಸಕ ಟಿ.ಎಸ್‌. ಶ್ರೀವತ್ಸ, ವಿಧಾನಪರಿಷತ್ ಸದಸ್ಯ ಶಿವಕುಮಾರ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಸೇರಿ ಅನೇಕ ಗಣ್ಯರು ಹೂವು ಅರ್ಪಿಸಿ ನಮನ ಸಲ್ಲಿಸಿದರು.

ಸರ್ಕಾರಿ ಗೌರವದ ಅಂಗವಾಗಿ ಪೊಲೀಸ್ ಅಧಿಕಾರಿ ಶಿವಾನಂದ ನೇತೃತ್ವದ ದಳವು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿತು. ಈ ಸಂದರ್ಭದಲ್ಲಿ ಭೈರಪ್ಪರ ಪುತ್ರರಿಗೆ ರಾಷ್ಟ್ರಧ್ವಜವನ್ನು ಹಸ್ತಾಂತರಿಸಲಾಯಿತು.

ಸಾಹಿತ್ಯ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಡಾ. ಭೈರಪ್ಪರು, ತಮ್ಮ ಕಾದಂಬರಿಗಳ ಮೂಲಕ ನೆನಪಾಗಿ ಉಳಿಯಲಿದ್ದಾರೆ.

ರಾಜ್ಯ