ದುಬೈ: ಏಷ್ಯಾ ಕಪ್ 2025ರ ಸೂಪರ್ ಫೋರ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಮತ್ತೆ ತೀವ್ರ ರಾಜಕೀಯ-ಕ್ರಿಕೆಟ್ ಕಾವು ಕಂಡುಬಂದಿದೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಟಾಸ್‌ನಲ್ಲಿ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಪಾಕಿಸ್ತಾನ ನಾಯಕ ಸಲ್ಮಾನ್ ಆಗಾ ವಿರುದ್ಧ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡಿದ್ದಾರೆ.

ಆದರೆ ಟಾಸ್ ನಂತರದ ಹಸ್ತಲಾಘವ ಪ್ರಕ್ರಿಯೆಯಲ್ಲಿ ಮತ್ತೊಮ್ಮೆ ವಿವಾದ ಮೂಡಿದೆ. ಕಳೆದ ವಾರದ ಪಂದ್ಯದಲ್ಲಿಯೇ ಹಸ್ತಲಾಘವ ನಿರಾಕರಿಸಿದ್ದ ಸೂರ್ಯಕುಮಾರ್, ಈ ಬಾರಿ ಕೂಡಾ ಸಲ್ಮಾನ್ ಆಗಾಗೆ ಕೈಕುಲುಕಲು ನಿರಾಕರಿಸಿದ್ದಾರೆ. ಪಂದ್ಯಾನಂತರವೂ ಭಾರತೀಯ ತಂಡ ಪಾಕಿಸ್ತಾನಿ ಆಟಗಾರರೊಂದಿಗೆ ಹಸ್ತಲಾಘವ ಮಾಡದಿರಲು ನಿರ್ಧಾರ ಮಾಡಿರುವಂತಿದೆ.
ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಲ್ಲಿ 26 ಮಂದಿ ಹುತಾತ್ಮರಾಗಿದ್ದ ಹಿನ್ನೆಲೆಯಲ್ಲಿ ಭಾರತ-ಪಾಕಿಸ್ತಾನ ಕ್ರಿಕೆಟ್ ಸಂಬಂಧದಲ್ಲಿ ಉದ್ವಿಗ್ನತೆ ತೀವ್ರಗೊಂಡಿದೆ. ಇದರ ಪರಿಣಾಮವೇ ಕ್ರಿಕೆಟ್ ಮೈದಾನದಲ್ಲಿಯೂ ಪ್ರತಿಫಲಿಸುತ್ತಿದೆ.

