ಉತ್ತರ ಕರ್ನಾಟಕದ ಯೂಟ್ಯೂಬರ್ ಮುಕಳೆಪ್ಪ “ನೈಜ ಧರ್ಮ ಬಯಲು” – ಹಿಂದೂ ಎಂದು ದಾಖಲೆ ಸೃಷ್ಟಿಸಿ ವಿವಾಹ

ಉತ್ತರ ಕರ್ನಾಟಕದ ಯೂಟ್ಯೂಬರ್ ಮುಕಳೆಪ್ಪ “ನೈಜ ಧರ್ಮ ಬಯಲು” – ಹಿಂದೂ ಎಂದು ದಾಖಲೆ ಸೃಷ್ಟಿಸಿ ವಿವಾಹ

ಧಾರವಾಡ (ಸೆ.19): ಉತ್ತರ ಕರ್ನಾಟಕದ ಯೂಟ್ಯೂಬರ್ ಮತ್ತು ಶಾರ್ಟ್‌ ವಿಡಿಯೋ ಸ್ಟಾರ್‌ ಕ್ವಾಜಾ ಅಲಿಯಾಸ್ ಮುಕಳೆಪ್ಪ ವಿರುದ್ಧ ಬಜರಂಗದಳ ಕಾರ್ಯಕರ್ತರು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ, ಮುಕಳೆಪ್ಪ ತನ್ನನ್ನು ಹಿಂದೂ ಧರ್ಮೀಯನೆಂದು ಸುಳ್ಳು ದಾಖಲೆ ಸೃಷ್ಟಿಸಿ ಗಾಯತ್ರಿ ಎಂಬ ಹಿಂದೂ ಯುವತಿಯನ್ನು ಜೂನ್ 5, 2025ರಂದು ಮುಂಡಗೋಡ ಸಬ್‌ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹವಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಮುಕಳೆಪ್ಪ ನೀಡಿದ ದಾಖಲೆಗಳಲ್ಲಿ ವಿಳಾಸವನ್ನು ಶಿರಹಟ್ಟಿ ಗಾಂಧಿನಗರ ಎಂದು ನಮೂದಿಸಿ ನಕಲಿ ಮಾಹಿತಿ ಒದಗಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ, ಆತ ತನ್ನ ವೀಡಿಯೊಗಳಲ್ಲಿ ಹಿಂದೂ ಧರ್ಮ ಮತ್ತು ಆಚರಣೆಗಳನ್ನು ಅವಮಾನಿಸುತ್ತಿದ್ದಾನೆ ಹಾಗೂ ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡುತ್ತಿದ್ದಾನೆ ಎಂದು ಬಜರಂಗದಳದ ಸಂಚಾಲಕ ಸಿದ್ದು ಹಿರೇಮಠ ಮತ್ತು ಕಾರ್ಯಕರ್ತ ಶಂಕರ್ ಹೇಳಿದ್ದಾರೆ.

ದೂರು ಹಿನ್ನೆಲೆಯಲ್ಲಿ ಧಾರವಾಡ ಗ್ರಾಮೀಣ ಪೊಲೀಸರು ಮುಕಳೆಪ್ಪ ಮತ್ತು ಅವನ ಪತ್ನಿ ಗಾಯತ್ರಿಯನ್ನು ವಿಚಾರಣೆಗೆ ಹಾಜರುಪಡಿಸಿದ್ದಾರೆ. ಗಾಯತ್ರಿ ತನ್ನ ವಿವಾಹದ ಬಗ್ಗೆ ಯಾವುದೇ ಅಸಮಾಧಾನವಿಲ್ಲ ಎಂದು ಹೇಳಿದ್ದಾಳೆ. ಈ ನಡುವೆ, ಹಿಂದೂ ಸಂಘಟನೆಯವರು “ಹಿಂದೂ ಹೆಣ್ಣುಮಕ್ಕಳು ಇಂತಹ ಮತಾಂಧರಿಂದ ಎಚ್ಚರಿಕೆಯಿಂದಿರಬೇಕು” ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಸದ್ಯ ಪ್ರಕರಣ ಸಂಬಂಧ ಪೊಲೀಸರು ಮುಕಳೆಪ್ಪ ನೀಡಿದ ದಾಖಲೆಗಳ ಸತ್ಯಾಸತ್ಯತೆ ಪರಿಶೀಲಿಸುತ್ತಿದ್ದು, ತನಿಖೆ ಮುಂದುವರೆದಿದೆ.

ಅಪರಾಧ ಧಾರ್ಮಿಕ ಮನೋರಂಜನೆ