ಉರುಳಾಗಲಿದೆಯೇ ಯಡಿಯೂರಪ್ಪನವರ ಪೋಕ್ಸೋ ಪ್ರಕರಣ? ವಿಚಾರಣೆಗೆ ಅರ್ಹವೆಂದ ಹೈಕೋರ್ಟ್

ಉರುಳಾಗಲಿದೆಯೇ ಯಡಿಯೂರಪ್ಪನವರ ಪೋಕ್ಸೋ ಪ್ರಕರಣ? ವಿಚಾರಣೆಗೆ ಅರ್ಹವೆಂದ ಹೈಕೋರ್ಟ್

ಬೆಂಗಳೂರು, ಸೆಪ್ಟೆಂಬರ್ 18: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣ ನ್ಯಾಯಾಲಯದ ವಿಚಾರಣೆಗೆ ಅರ್ಹವಾಗಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಯಡಿಯೂರಪ್ಪ ಹಾಗೂ ಇತರರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ. ಅರುಣ್ ಅವರ ಪೀಠ, ಅಧೀನ ನ್ಯಾಯಾಲಯ ಪ್ರಕರಣವನ್ನು ವಿಚಾರಣೆಗೆ ಪರಿಗಣಿಸಿರುವ ಕ್ರಮವನ್ನು ಪ್ರಶ್ನಿಸಿ ಅಭಿಪ್ರಾಯ ನೀಡಿತು.

ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳು, “ಪ್ರಕರಣದ ಕಡತ ನೋಡಿದ ನಂತರ ಮೇಲ್ನೋಟಕ್ಕೆ ಇದು ವಿಚಾರಣೆಗೆ ಅರ್ಹವಾಗಿದೆ ಎನ್ನುವುದು ನನ್ನ ಪ್ರಾಮಾಣಿಕ ಅಭಿಪ್ರಾಯ. ಪೋಕ್ಸೋ ಪ್ರಕರಣದಲ್ಲಿ ಕೆಲವೊಮ್ಮೆ ಸಂತ್ರಸ್ತೆಯ ಹೇಳಿಕೆಯೊಂದೇ ಶಿಕ್ಷೆ ವಿಧಿಸಲು ಸಾಕಾಗುತ್ತದೆ. ಸಂತ್ರಸ್ತೆಯ ತಾಯಿ ಯಡಿಯೂರಪ್ಪ ಮನೆಗೆ ಬಂದದ್ದು ಏಕೆ? ಯಡಿಯೂರಪ್ಪ ಸಂತ್ರಸ್ತೆಗೆ ಹಣ ನೀಡಲು ಮುಂದಾದದ್ದು ಏಕೆ? – ಇವು ವಿಚಾರಣೆಗೆ ಅರ್ಹ ಅಂಶಗಳು” ಎಂದು ತಿಳಿಸಿದರು.

ಅವರು ಮುಂದುವರಿದು, “ಪ್ರಕರಣ ರದ್ದಾಗುತ್ತದೆ ಎಂಬ ಸ್ಪಷ್ಟತೆ ಇದ್ದರೆ ನಿಮ್ಮ ವಾದ ಆಲಿಸುತ್ತೇವೆ. ಈ ಪ್ರಕರಣಕ್ಕೆ ಕನಿಷ್ಠ ಐದು ದಿನಗಳ ಮಧ್ಯಾಹ್ನದ ಸಂಪೂರ್ಣ ಕಲಾಪ ಬೇಕಾಗುತ್ತದೆ. ಇಲ್ಲಿ ‘ಆರೋಪವೇ ಇಲ್ಲ’ ಎಂಬುದಾಗಿ ಹೇಳುವಂತ ಪ್ರಕರಣವಲ್ಲ. ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ, ವಿರೋಧ ಪಕ್ಷದಲ್ಲಿದ್ದಾರೆ, ಕಿರುಕುಳದ ಭೀತಿ ಇದ್ದರೆ ರಕ್ಷಣಾತ್ಮಕ ಆದೇಶ ನೀಡಲು ಸಾಧ್ಯ” ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಪರ ವಕೀಲರು, ನ್ಯಾಯಾಲಯದ ಅಭಿಪ್ರಾಯವನ್ನು ಅರ್ಥಮಾಡಿಕೊಂಡಿದ್ದೇವೆ, ಚರ್ಚಿಸಿ ಮುಂದಿನ ಹಂತದಲ್ಲಿ ತಿಳಿಸುತ್ತೇವೆ ಎಂದು ನುಡಿದರು. ನಂತರ ನ್ಯಾಯಮೂರ್ತಿಗಳು ವಿಚಾರಣೆಯನ್ನು ಮುಂದೂಡಿದರು.

ಅಪರಾಧ ರಾಜ್ಯ