ಕಾಸರಗೋಡು ಜಿಲ್ಲೆಯಲ್ಲಿ 16 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಸಹಾಯಕ ಶಿಕ್ಷಣಾಧಿಕಾರಿ (AEO), ರೈಲ್ವೆ ರಕ್ಷಣಾ ಪಡೆ (RPF) ಅಧಿಕಾರಿ ಸೇರಿದಂತೆ ಒಟ್ಟು ಒಂಭತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಕಾಸರಗೋಡು, ಕಣ್ಣೂರು, ಕೋಝಿಕ್ಕೋಡ್ ಮತ್ತು ಎರ್ನಾಕುಲಂ ಜಿಲ್ಲೆಗಳವರಾಗಿದ್ದು, ಬಾಲಕನಿಗೆ ಸಂಬಂಧಿಸಿದಂತೆ 16 ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಬಂಧಿತರಲ್ಲಿ ಸಹಾಯಕ ಶಿಕ್ಷಣಾಧಿಕಾರಿ ಝೈನುದ್ದೀನ್ ವಿ.ಕೆ., ಚಿತ್ರರಾಜ್ ಎರವಿಲ್, RPF ಅಧಿಕಾರಿ ಅಬ್ದುಲ್ ರಹ್ಮಾನ್ ಹಾಜಿ ಸೇರಿದಂತೆ ಇತರರು ಸೇರಿದ್ದಾರೆ. ಈ ಪ್ರಕರಣ ಬಹಿರಂಗವಾದ ನಂತರ ಸರ್ಕಾರ ಝೈನುದ್ದೀನ್ ಅವರನ್ನು ಸೇವೆಯಿಂದ ಅಮಾನತು ಮಾಡಿದೆ. ಬಾಲಕನ ತಾಯಿ ಮೊಬೈಲ್ ಫೋನಿನ ಮೂಲಕ ಸಂಪರ್ಕ ಮತ್ತು ಭೇಟಿಗಳ ವಿಚಾರದಲ್ಲಿ ಅನುಮಾನಗೊಂಡು, ಪ್ರಕರಣ ಹೊರಬಿದ್ದಿದ್ದು, ಬಳಿಕ ಚೈಲ್ಡ್ ಲೈನ್ ಹಾಗೂ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (IPC) 377ನೇ ವಿಧಿ ಹಾಗೂ POCSO ಕಾಯಿದೆ ಅಡಿಯಲ್ಲಿ ಹಲವು ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.


