ಬೆಂಗಳೂರಿನ ಗಾಂಧಿನಗರದಲ್ಲಿರುವ ಹೋಟೆಲ್‌ನಲ್ಲಿ ಸೋಮವಾರ ನಡೆದಿದ್ದ ‘ಹಿಂದಿ ದಿನಾಚರಣೆ’ ಕಾರ್ಯಕ್ರಮಕ್ಕೆ ಕನ್ನಡ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಮಹಿಳಾ ಕಾರ್ಯಕರ್ತೆಯರು ಅಡ್ಡಿಪಡಿಸಿದರು.

ಪ್ರತಿ ವರ್ಷ ಸೆಪ್ಟೆಂಬರ್ 14ರಂದು ಹಿಂದಿ ದಿನಾಚರಣೆ ನಡೆಯುತ್ತಿದ್ದರೂ, ಈ ಬಾರಿ ‘ರಾಜ್ಯ ಭಾಷಾ ಮಹಾಸಭಾ ಸಂಘ’ದ ಆಶ್ರಯದಲ್ಲಿ ಭಾನುವಾರ ಬಂದು ಬಿಟ್ಟ ಕಾರಣ ಸೋಮವಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಕನ್ನಡ ರಕ್ಷಣಾ ವೇದಿಕೆ ಮಹಿಳಾ ಕಾರ್ಯಕರ್ತೆಯರು, ವೇದಿಕೆಯಲ್ಲಿ ಹಾಕಲಾಗಿದ್ದ “ರಾಜ್ಯ ಭಾಷಾ ಮಹಾಸಭಾ ಸಂಘ” ಎಂಬ ಬ್ಯಾನರ್ ಕುರಿತು ಪ್ರಶ್ನೆ ಎತ್ತಿದರು. “ರಾಜ್ಯ ಭಾಷೆ ಎಂದರೆ ನಿಮಗೆ ಹಿಂದಿ ಮಾತ್ರವೇನಾ? ಕನ್ನಡವನ್ನು ಏಕೆ ಕಡೆಗಣಿಸಲಾಗಿದೆ?” ಎಂದು ಸಂಘಟಕರಿಗೆ ಪ್ರಶ್ನಿಸಿದರು.
ಹಿಂದಿ ಭಾಷೆಯಲ್ಲಿ ಮಾತ್ರ ಮಾತನಾಡುತ್ತಿದ್ದ ಸಂಘಟಕರ ವಿರುದ್ಧ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿ, “ಇಲ್ಲಿ ಕನ್ನಡವೇ ಪ್ರಥಮ, ಹಿಂದಿಯನ್ನು ಹೇರುವುದು ಸಹಿಸಲಾರೆವು” ಎಂದು ಘೋಷಣೆ ಕೂಗಿದರು. ವೇದಿಕೆಯಲ್ಲಿ ಹಾಕಿದ್ದ ಬ್ಯಾನರ್‌ಗಳನ್ನು ಕೆಳಗೆ ಇಳಿಸಿ, ಕಾರ್ಯಕ್ರಮವನ್ನು ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿದರು.
“ನಮ್ಮ ರಾಜ್ಯದಲ್ಲಿ ಹಿಂದಿಗೆ ಸ್ಥಾನ ಇಲ್ಲ, ಕನ್ನಡವೇ ಶ್ರೇಷ್ಠ” ಎಂದು ಘೋಷಣೆಗಳನ್ನು ಕೂಗಿದ ಕಾರ್ಯಕರ್ತೆಯರನ್ನು ನಂತರ ಉಪ್ಪಾರಪೇಟೆ ಪೊಲೀಸರು ಬಂಧಿಸಿ ಸ್ಥಳದಿಂದ ತೆರವುಗೊಳಿಸಿದರು.

