ನವದೆಹಲಿ: ಭಾನುವಾರ ಸಂಜೆ ದೆಹಲಿ ಕ್ಯಾಂಟ್ ಮೆಟ್ರೋ ನಿಲ್ದಾಣದ ಬಳಿ ರಿಂಗ್‌ರೋಡ್‌ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮೃತಪಟ್ಟಿದ್ದು, ಅವರ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರನ್ನು ನವಜೋತ್ ಸಿಂಗ್ (52) ಎಂದು ಗುರುತಿಸಲಾಗಿದ್ದು, ಅವರು ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಉಪ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಪತ್ನಿ ಸಂದೀಪ್ ಕೌರ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರ ಪ್ರಕಾರ, ದಂಪತಿ ಬಂಗ್ಲಾ ಸಾಹಿಬ್ ಗುರುದ್ವಾರದಿಂದ ಮನೆಗೆ ಬೈಕ್‌ನಲ್ಲಿ ಮರಳುತ್ತಿದ್ದ ವೇಳೆ ಬಿಎಂಡಬ್ಲ್ಯು ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಘಟನೆಯ ನಂತರ ಕಾರು ಓಡಿಸುತ್ತಿದ್ದ ಗಗನಪ್ರೀತ್ ಹಾಗೂ ಪತಿ ಪರಿಕ್ಷಿತ್ ಗಾಯಾಳು ದಂಪತಿಯನ್ನು ಟ್ಯಾಕ್ಸಿಯಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಕುಟುಂಬದವರ ಆಕ್ಷೇಪಣೆಯ ಪ್ರಕಾರ, ಅಪಘಾತ ಸ್ಥಳದಿಂದ ಕೇವಲ ಕೆಲವು ಕಿಲೋಮೀಟರ್ ಅಂತರದಲ್ಲೇ ಆಸ್ಪತ್ರೆಗಳಿದ್ದರೂ 17 ಕಿ.ಮೀ ದೂರದ ಜಿಟಿಬಿ ನಗರದ ನ್ಯೂಲೈಫ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಮೃತರ ಪುತ್ರನು, “ನನ್ನ ತಂದೆ ತಕ್ಷಣ ಮೃತಪಟ್ಟಿದ್ದಾರೆ, ತಾಯಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಅಪಘಾತಕ್ಕೆ ಕಾರಣರಾದ ಮಹಿಳೆಯನ್ನೂ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂಬ ಮಾಹಿತಿ ಇದೆ. ಆದರೆ ಆಸ್ಪತ್ರೆ ಅವಳ ಬಗ್ಗೆ ಯಾವುದೇ ಮಾಹಿತಿ ನೀಡದೆ ತಪ್ಪಿಸಿಕೊಳ್ಳುತ್ತಿದೆ. ನಕಲಿ ವೈದ್ಯಕೀಯ ದಾಖಲೆ ಸಿದ್ಧಪಡಿಸುತ್ತಿದ್ದಾರೆ ಎಂಬ ಅನುಮಾನವಿದೆ” ಎಂದು ಆರೋಪಿಸಿದ್ದಾರೆ.
ಅಪಘಾತದಲ್ಲಿ ಪಲ್ಟಿಯಾದ ಬಿಎಂಡಬ್ಲ್ಯು ಕಾರು ಹಾಗೂ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸ್ಥಳ ಪರಿಶೀಲನೆಗಾಗಿ ಕ್ರೈಂ ತಂಡ ಮತ್ತು ಫಾರೆನ್ಸಿಕ್ ತಜ್ಞರನ್ನು ಕರೆಸಿಕೊಳ್ಳಲಾಗಿದೆ.
ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿದ್ದು, ಮುಂದಿನ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

