ವಿವಾಹ ನಿರಾಕರಣೆ ಹಿನ್ನೆಲೆಯಲ್ಲಿ – ಯುವತಿಯ ಜನ್ಮದಿನದಂದೇ ನೆರೆಮನೆ ಯುವಕನಿಂದ ಚೂರಿ ಇರಿತ

ವಿವಾಹ ನಿರಾಕರಣೆ ಹಿನ್ನೆಲೆಯಲ್ಲಿ – ಯುವತಿಯ ಜನ್ಮದಿನದಂದೇ ನೆರೆಮನೆ ಯುವಕನಿಂದ ಚೂರಿ ಇರಿತ

ಉಡುಪಿ: ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ನಿವಾಸಿ 24 ವರ್ಷದ ರಕ್ಷಿತಾ ಎಂಬ ಯುವತಿ ಮೇಲೆ ನೆರೆಮನೆಯ ಯುವಕನಿಂದ ಚೂರಿ ದಾಳಿ ನಡೆದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.

ಪೊಲೀಸರ ಮಾಹಿತಿ ಪ್ರಕಾರ, ಶುಕ್ರವಾರ ಬೆಳಿಗ್ಗೆ ಸುಮಾರು 8.30ರ ವೇಳೆಗೆ ರಕ್ಷಿತಾ ಬಸ್ ನಿಲ್ದಾಣದತ್ತ ತೆರಳುತ್ತಿದ್ದಾಗ ಆರೋಪಿಯಿಂದ ಹಲ್ಲೆ ನಡೆಯಿತು. ತನ್ನ ಜನ್ಮದಿನದಂದು ಈ ದುರಂತ ಸಂಭವಿಸಿದ್ದು, ಆಕೆಯ ಕುತ್ತಿಗೆ ಹಾಗೂ ಎದೆ ಭಾಗದಲ್ಲಿ ಗಂಭೀರ ಗಾಯಗಳಾಗಿವೆ. ಪ್ರಸ್ತುತ ಮಣಿಪಾಲದ ಆಸ್ಪತ್ರೆಗೆ ಸೇರಿಸಲ್ಪಟ್ಟಿರುವ ರಕ್ಷಿತಾ ಅವರ ಆರೋಗ್ಯ ಸ್ಥಿತಿ ಆತಂಕಕಾರಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ನೆರೆಯವನಾದ ಕಾರ್ತಿಕ್ ಪೂಜಾರಿ, ರಕ್ಷಿತಾಳನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ. ಆದರೆ ಕುಟುಂಬದವರು ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಆಕೆಯು ಎರಡು ವಾರಗಳ ಹಿಂದೆ ಆರೋಪಿಯ ದೂರವಾಣಿ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದಳು. ಇದರಿಂದ ಕೋಪಗೊಂಡ ಆರೋಪಿಯು ಚೂರಿ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ.

ಕೆಲವು ವರದಿಗಳ ಪ್ರಕಾರ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಆರೋಪಿ ಕಾರ್ತಿಕ್ ಪೂಜಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಮಾಹಿತಿಯೂ ಇದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿಕ್ ಪೂಜಾರಿ ಮುಖ್ಯ ಆರೋಪಿ ಎಂದು ಪೊಲೀಸರು ದೃಢಪಡಿಸಿದ್ದು, ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಅಪರಾಧ