ಉಡುಪಿ: ಪ್ರಸಿದ್ಧ ಸಂಗೀತ ನಿರ್ದೇಶಕ ಇಳಯರಾಜ ಅವರು ಬುಧವಾರ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಿಗೆ ವಜ್ರ ಖಚಿತ ಕಿರೀಟ ಹಾಗೂ ಆಭರಣಗಳನ್ನು ಸಮರ್ಪಿಸಿದರು. ಜೊತೆಗೆ ಶ್ರೀ ವೀರಭದ್ರ ಸ್ವಾಮಿಗೆ ಬೆಳ್ಳಿ ಕಿರೀಟ ಮತ್ತು ಕತ್ತಿಯನ್ನು ಅರ್ಪಿಸಿದರು.

ದಶಕಗಳ ಕಾಲ ಶ್ರೀ ಮೂಕಾಂಬಿಕಾ ದೇವಾಲಯದ ಭಕ್ತನಾಗಿ ಇರುವ ಇಳಯರಾಜ ಅವರು, ಈ ಹಿಂದೆ ಹಲವಾರು ಬಾರಿ ದೇವಾಲಯಕ್ಕೆ ಭೇಟಿ ನೀಡಿ ಅಮೂಲ್ಯ ಕಾಣಿಕೆಗಳನ್ನು ನೀಡಿದ್ದಾರೆ. ತಮ್ಮ ಭಕ್ತಿಯನ್ನು ಮುಂದುವರೆಸಿದ ಅವರು ಮತ್ತೊಮ್ಮೆ ಅಮೂಲ್ಯ ಆಭರಣಗಳನ್ನು ಸಮರ್ಪಿಸಿದರು.



ಅಲಂಕೃತ ರಥದಲ್ಲಿ ಆಭರಣಗಳನ್ನು ದೇವಸ್ಥಾನ ಪ್ರವೇಶದ್ವಾರವರೆಗೆ ಕರೆತರಲಾಗಿದ್ದು, ಬಳಿಕ ಪಲ್ಲಕ್ಕಿಯಲ್ಲಿ ದೇವಾಲಯದೊಳಗೆ ಸಾಗಿಸಲಾಯಿತು. ಇಳಯರಾಜ ಅವರಿಗೆ ಸಾಂಪ್ರದಾಯಿಕ ಸ್ವಾಗತ ಕೋರಿದ ನಂತರ ಅವರು ದೇವಿಗೆ ವಜ್ರ ಕಿರೀಟ ಹಾಗೂ ಆಭರಣಗಳನ್ನು, ಶ್ರೀ ವೀರಭದ್ರ ಸ್ವಾಮಿಗೆ ಬೆಳ್ಳಿ ಕಿರೀಟ ಮತ್ತು ಕತ್ತಿಯನ್ನು ಹಸ್ತಾಂತರಿಸಿದರು.
ಭಕ್ತಿಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು : “ನಾನು ನಾನು ಮಾತನಾಡುವುದಿಲ್ಲ, ಕೆಲಸ ಮಾಡುತ್ತೇನೆ. ನನ್ನ ಹಳೆಯ ಇತಿಹಾಸ ನೋಡಿದರೆ ದೇವಾಲಯದೊಂದಿಗೆ ಇರುವ ಸಂಬಂಧ ತಿಳಿಯುತ್ತದೆ. ನಾವು ಏನಕ್ಕಾಗಿ ಬಂದಿದ್ದೇವೋ, ಆ ಕೆಲಸ ಇಂದು ನೆರವೇರಿದೆ. ದೇವಿ ಎಲ್ಲರಿಗೂ ಆಶೀರ್ವಾದ ಮಾಡಲಿ” ಎಂದು ಹೇಳಿದರು.
ದೇವಾಲಯದ ಹಿರಿಯ ಅರ್ಚಕ ಶ್ರೀಧರ ಅಡಿಗ ಅವರು ಇಳಯರಾಜ ಅವರ ಭಕ್ತಿಯನ್ನು ಕೊಂಡಾಡಿದರು. “ಅವರು ಹಲವು ಬಾರಿ ಅಮೂಲ್ಯ ಆಭರಣಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಇಂದೂ ಕೂಡಾ ಅಮೂಲ್ಯ ಕಾಣಿಕೆಗಳನ್ನು ಅರ್ಪಿಸಿದ್ದಾರೆ. ದೇವಿ ಎಲ್ಲರಿಗೂ ಆಶೀರ್ವಾದ ಮಾಡಲಿ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಇಳಯರಾಜ ಅವರನ್ನು ದೇವಸ್ಥಾನದ ವತಿಯಿಂದ ಸತ್ಕರಿಸಲಾಯಿತು.

