ಯುವಕರ ಹಿಂಸಾತ್ಮಕ ಪ್ರತಿಭಟನೆಗಳಿಂದ ಕನಿಷ್ಠ 19 ಮಂದಿ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡ ಹಿನ್ನೆಲೆಯಲ್ಲಿ ನೇಪಾಳ ಸರ್ಕಾರ ತನ್ನ ಸಾಮಾಜಿಕ ಜಾಲತಾಣ ನಿಷೇಧದ ತೀರ್ಮಾನವನ್ನು ಹಿಂತೆಗೆದುಕೊಂಡಿದೆ.

ಸಂವಹನ, ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಥ್ವೀ ಸುಬ್ಬಾ ಗುರುಂಗ್ ಅವರು ತುರ್ತು ಸಚಿವ ಸಂಪುಟ ಸಭೆಯ ಬಳಿಕ ಈ ನಿರ್ಧಾರವನ್ನು ಪ್ರಕಟಿಸಿದರು.
ಯುವಕರ ಆಕ್ರೋಶ ತೀವ್ರಗೊಂಡ ಹಿನ್ನೆಲೆಯಲ್ಲಿ ರಾಜಧಾನಿ ಕಠ್ಮಂಡು ಸೇರಿದಂತೆ ಪ್ರಮುಖ ನಗರಗಳಲ್ಲಿ ಪೊಲೀಸರು ಅಶ್ರುವಾಯು ಮತ್ತು ನೀರಿನ ತೋಪು ಬಳಸಿ ಪ್ರತಿಭಟನೆಯನ್ನು ನಿಯಂತ್ರಿಸಲು ಪ್ರಯತ್ನಿಸಿದ್ದರು. ಆದರೆ ಪರಿಸ್ಥಿತಿ ಹಿಂಸಾತ್ಮಕ ತಿರುವು ಪಡೆದು ದೊಡ್ಡ ಪ್ರಮಾಣದ ಜೀವಹಾನಿ ಮತ್ತು ಗಾಯಗಳಿಗೆ ಕಾರಣವಾಯಿತು.

