ಸಾಮಾಜಿಕ ಜಾಲತಾಣಗಳ ಮೇಲಿನ ನಿಷೇಧ ಹಾಗೂ ಭ್ರಷ್ಟಾಚಾರದ ವಿರುದ್ಧ ನೇಪಾಳದ Generation Z ಹೆಸರಿನಲ್ಲಿ ಯುವಕರು ಸೋಮವಾರ (ಸೆಪ್ಟೆಂಬರ್ 8, 2025) ದೇಶದ ಪ್ರಮುಖ ನಗರಗಳಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಪೊಲೀಸ್ ಗುಂಡಿನ ದಾಳಿಯಲ್ಲಿ ಕನಿಷ್ಠ 19 ಮಂದಿ ಸಾವನ್ನಪ್ಪಿದ್ದು, 340 ಮಂದಿ ಗಾಯಗೊಂಡಿದ್ದಾರೆ.




ಕಠ್ಮಂಡು, ಪೊಖರಾ, ಬಟ್ವಾಲ್, ಧರಣ್, ಘೋರಾಹಿ ಸೇರಿದಂತೆ ಅನೇಕ ನಗರಗಳಲ್ಲಿ ಲಕ್ಷಾಂತರ ಯುವ ಪ್ರತಿಭಟನಾಕಾರರು “ನಾವು ಚಳುವಳಿ, ಭ್ರಷ್ಟಾಚಾರದ ವಿರುದ್ಧ ಹೋರಾಟ ಮುಂದುವರಿಸುತ್ತೇವೆ” ಎಂದು ಘೋಷಣೆ ಕೂಗಿದರು.
ಸೋಮವಾರ ಕಠ್ಮಂಡುವಿನ ನ್ಯೂ ಬಾನೇಶ್ವರ್‌ನಲ್ಲಿರುವ ಫೆಡರಲ್ ಸಂಸತ್ ಭವನದ ಕಡೆ ಪ್ರತಿಭಟನಾಕಾರರು ಮೆರವಣಿಗೆ ನಡೆಸಿ, ಅಡೆತಡೆಗಳನ್ನು ಮೀರಿ ಸಂಸತ್ ಆವರಣ ಪ್ರವೇಶಿಸಿದರು. ಈ ವೇಳೆ ಪ್ರಧಾನಿ ಕೆ.ಪಿ. ಶರ್ಮಾ ಒಲಿ ವಿರುದ್ಧ ಘೋಷಣೆ ಕೂಗಿದರು.
ಅವರನ್ನು ತಡೆಯಲು ಪೊಲೀಸರು ಮೊದಲು ರಬ್ಬರ್ ಗುಂಡುಗಳನ್ನು ಹಾರಿಸಿದರೂ ವಿಫಲರಾದರು. ಬಳಿಕ ಅಶ್ರುವಾಯು ಮತ್ತು ನೀರಿನ ತೋಪುಗಳನ್ನು ಬಳಸಿ ಚದುರಿಸಲು ಯತ್ನಿಸಲಾಯಿತು.
ಕರ್ಫ್ಯೂ ಜಾರಿಯಾಗಿದೆ
ಕಠ್ಮಂಡು ಜಿಲ್ಲಾಡಳಿತ ಕಚೇರಿ ಬಾನೇಶ್ವರ್, ಶೀತಲ್ ನಿವಾಸ್ (ರಾಷ್ಟ್ರಪತಿ ಭವನ), ಲೈನಚೌರ್ (ಉಪರಾಷ್ಟ್ರಪತಿ ಭವನ), ಬಾಲುವಟಾರ್ (ಪ್ರಧಾನಿ ನಿವಾಸ) ಹಾಗೂ ಸಿಂಹದುರ್ಬಾರ್ (ಸರ್ಕಾರಿ ಸಂಕೀರ್ಣ) ಪ್ರದೇಶಗಳಲ್ಲಿ ಮಧ್ಯಾಹ್ನ 1 ರಿಂದ ರಾತ್ರಿ 10 ಗಂಟೆಯವರೆಗೆ ಕರ್ಫ್ಯೂ ಘೋಷಿಸಿದೆ.
🔸ಸಾಮಾಜಿಕ ಜಾಲತಾಣ ನಿಷೇಧದ ವಿರುದ್ಧ ಆಕ್ರೋಶ
ಪ್ರಧಾನಿ ಒಲಿಯವರ ನೇತೃತ್ವದ ಸರ್ಕಾರ ಕಳೆದ ಗುರುವಾರ (ಸೆಪ್ಟೆಂಬರ್ 5) ಫೇಸ್ಬುಕ್, ಇನ್‌ಸ್ಟಾಗ್ರಾಂ, ವಾಟ್ಸಾಪ್, X ಸೇರಿದಂತೆ 20 ಕ್ಕೂ ಹೆಚ್ಚು ಸಾಮಾಜಿಕ ಜಾಲತಾಣಗಳ ಮೇಲೆ ನಿಷೇಧ ಹೇರಿತ್ತು. ಈ ನಿರ್ಧಾರವು ಯುವಕರಲ್ಲಿ ತೀವ್ರ ಅಸಮಾಧಾನ ಹುಟ್ಟಿಸಿದೆ.
ರಾಜಕೀಯ ಪಕ್ಷಗಳ ಹಸ್ತಕ್ಷೇಪವಿಲ್ಲದೆ, ಯುವಕರು ಸ್ವಯಂಸ್ಪೂರ್ತಿಯಾಗಿ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಕಠ್ಮಂಡು ಮೇಯರ್ ಬಲೆಂದ್ರ ಶಾ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ.

