ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ರಷ್ಯಾದಿಂದ ಮಹತ್ವದ ಮುನ್ನಡೆ ಸಾಧನೆಯಾಗಿದೆ. ರಷ್ಯಾದ ಫೆಡರಲ್ ಮೆಡಿಕಲ್ ಅಂಡ್ ಬಯಾಲಜಿಕಲ್ ಏಜೆನ್ಸಿ (FMBA) ಘೋಷಿಸಿದಂತೆ, ದೇಶದ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ mRNA ಆಧಾರಿತ ಕ್ಯಾನ್ಸರ್ ಲಸಿಕೆ ‘ಎಂಟರೋಮಿಕ್ಸ್’ ಪ್ರೀ-ಕ್ಲಿನಿಕಲ್ ಪರೀಕ್ಷೆಗಳಲ್ಲಿ 100% ಯಶಸ್ಸು ಕಂಡಿದೆ.

ಈ ಲಸಿಕೆ ಸುರಕ್ಷಿತವಾಗಿರುವುದರ ಜೊತೆಗೆ ಕ್ಯಾನ್ಸರ್ ಗಡ್ಡೆಗಳ ವಿರುದ್ಧ ಶಕ್ತಿಶಾಲಿ ಹೋರಾಟ ನಡೆಸುವ ಸಾಮರ್ಥ್ಯ ತೋರಿಸಿದೆ.
ಎಫ್‌ಎಂಬಿಎ ಮುಖ್ಯಸ್ಥೆ ವೆರೋನಿಕಾ ಸ್ಕ್ವೋರ್ಸೋವಾ ಹೇಳುವಂತೆ, ಈ ಲಸಿಕೆ ಪ್ರತಿ ರೋಗಿಗೆ ವೈಯಕ್ತಿಕವಾಗಿ ತಯಾರಿಸಲಾಗುತ್ತದೆ. ಮೊದಲ ಹಂತದಲ್ಲಿ ಇದನ್ನು ಕೋಲೊರೆಕ್ಟಲ್ ಕ್ಯಾನ್ಸರ್ ಚಿಕಿತ್ಸೆಗೆ ಬಳಸಲಾಗುವುದು.
ಪ್ರೀ-ಕ್ಲಿನಿಕಲ್ ಪರೀಕ್ಷೆಯಲ್ಲಿ ಗಡ್ಡೆಗಳ ಗಾತ್ರವು ಗಣನೀಯವಾಗಿ ಕುಂದಿದಂತೆಯೇ ಅವುಗಳ ಬೆಳವಣಿಗೆ ನಿಧಾನಗೊಂಡಿರುವುದು ಕಂಡುಬಂದಿದೆ. ಇದೇ ವೇಳೆ ಪುನಃಪುನಃ ಬಳಕೆಗೆ ಈ ಲಸಿಕೆ ಸುರಕ್ಷಿತ ಎಂದು ಸಹ ಸಾಬೀತಾಗಿದೆ.
ಸಾಮಾನ್ಯವಾಗಿ ನಾವು ಬಾಲ್ಯದಲ್ಲಿ ಪಡೆಯುವ ಲಸಿಕೆಗಳು (ಮೀಜಲ್ಸ್, ಚಿಕನ್‌ಪಾಕ್ಸ್ ಮುಂತಾದವು) ಸೋಂಕು ತಡೆಗಟ್ಟಲು ಬಳಸಲಾಗುತ್ತದೆ. ಆದರೆ ಎಂಟರೋಮಿಕ್ಸ್ ರೀತಿಯ ಥೆರಪ್ಯೂಟಿಕ್ ಲಸಿಕೆಗಳು ಈಗಿರುವ ಕ್ಯಾನ್ಸರ್ ಕೋಶಗಳ ಮೇಲೆ ನೇರ ಹೋರಾಟ ನಡೆಸುತ್ತವೆ.
ಈ ಮಹತ್ವದ ಘೋಷಣೆಯನ್ನು ಸೆಪ್ಟೆಂಬರ್ 3ರಿಂದ 6ರವರೆಗೆ ನಡೆದ 10ನೇ ಈಸ್ಟರ್ನ್ ಎಕನಾಮಿಕ್ ಫೋರಂ ವೇಳೆ ಮಾಡಲಾಯಿತು. 75 ದೇಶಗಳಿಂದ 8,400ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಎಂಟರೋಮಿಕ್ಸ್ ಎಲ್ಲರ ಗಮನ ಸೆಳೆಯಿತು.
ಜಾಗತಿಕವಾಗಿ ಪ್ರತಿ ವರ್ಷ ಲಕ್ಷಾಂತರ ಹೊಸ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ. ಮಾನವ ಪ್ರಯೋಗಗಳಲ್ಲಿ ಸಹ ಈ ಲಸಿಕೆ ಯಶಸ್ವಿಯಾದರೆ, ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕ್ರಾಂತಿಯನ್ನೇ ತರಬಹುದೆಂಬ ನಿರೀಕ್ಷೆ ವೈದ್ಯಕೀಯ ಕ್ಷೇತ್ರದಲ್ಲಿ ಮೂಡಿದೆ.

