ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಸುವ ಅಧಿಕೃತ ಟೊಯೋಟಾ ಫಾರ್ಚುನರ್ ಕಾರು, 2024ರ ಆರಂಭದಿಂದ ಇಂದಿನವರೆಗೆ ಏಳು ಬಾರಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿರುವುದು ಬಹಿರಂಗವಾಗಿದೆ. ನಗರದ ವಿವಿಧ ಪ್ರಮುಖ ಜಂಕ್ಷನ್‌ಗಳಲ್ಲಿ ಅಳವಡಿಸಿರುವ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ITMS) ಕ್ಯಾಮೆರಾಗಳು ಈ ಉಲ್ಲಂಘನೆಗಳನ್ನು ಪತ್ತೆಹಚ್ಚಿವೆ ಎಂದು ಟ್ರಾಫಿಕ್ ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.

ಏಳು ಉಲ್ಲಂಘನೆಗಳಲ್ಲಿ ಆರು ಬಾರಿ, ಮುಖ್ಯಮಂತ್ರಿ ಮುಂಭಾಗದ ಸೀಟಿನಲ್ಲಿ ಪ್ರಯಾಣಿಸುತ್ತಿದ್ದಾಗ ಸೀಟು ಬೆಲ್ಟ್ ಧರಿಸದ ಕಾರಣ ಪ್ರಕರಣ ದಾಖಲಾಗಿದೆ. ಒಟ್ಟು ರೂ. 2,500 ದಂಡವನ್ನು ಸರ್ಕಾರದ ಇತ್ತೀಚಿನ 50% ರಿಯಾಯಿತಿಯಡಿ ವಿಧಿಸಲಾಗಿದೆ.
ಮೊದಲ ಬಾರಿಗೆ ಜನವರಿ 24ರಂದು ಓಲ್ಡ್ ಏರ್‌ಪೋರ್ಟ್ ರಸ್ತೆಯ ಲೀಲಾ ಪ್ಯಾಲೆಸ್ ಜಂಕ್ಷನ್ ಬಳಿ ಸೀಟು ಬೆಲ್ಟ್ ಉಲ್ಲಂಘನೆ ದಾಖಲಾಗಿದ್ದು, ಫೆಬ್ರವರಿ ಹಾಗೂ ಆಗಸ್ಟ್‌ನಲ್ಲಿ ಇದೇ ಜಂಕ್ಷನ್‌ನಲ್ಲಿ ಮತ್ತೆ ನಿಯಮ ಉಲ್ಲಂಘನೆ ನಡೆದಿದೆ. ಮಾರ್ಚ್‌ನಲ್ಲಿ ಚಂದ್ರಿಕಾ ಹೋಟೆಲ್ ಜಂಕ್ಷನ್, ಆಗಸ್ಟ್‌ನಲ್ಲಿ ಶಿವಾನಂದ ಸರ್ಕಲ್ ಹಾಗೂ ಡಾ.ರಾಜ್ ಕುಮಾರ್ ಜಂಕ್ಷನ್‌ಗಳಲ್ಲಿ ಮತ್ತಷ್ಟು ಪ್ರಕರಣಗಳು ದಾಖಲಾಗಿವೆ.
ಇದರ ಹೊರತಾಗಿ, ಜುಲೈ 9ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಕ್ಸ್‌ಪ್ರೆಸ್ ಕಾರಿಡಾರ್‌ನಲ್ಲಿ ವೇಗ ಮೀರಿದ ಪ್ರಕರಣವೂ ದಾಖಲಾಯಿತು.
ಟ್ರಾಫಿಕ್ ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರು ದಂಡದ ಮೊತ್ತವನ್ನು ಈಗಾಗಲೇ ಪಾವತಿಸಲಾಗಿದೆ ಎಂದು ದೃಢಪಡಿಸಿದ್ದಾರೆ.

