ಮಕ್ಕಳ ಆಟ ದುರಂತದಲ್ಲಿ ಅಂತ್ಯ – ಏರ್‌ಗನ್ ಗುಂಡಿಗೆ 9 ವರ್ಷದ ಬಾಲಕ ಬಲಿ

ಮಕ್ಕಳ ಆಟ ದುರಂತದಲ್ಲಿ ಅಂತ್ಯ – ಏರ್‌ಗನ್ ಗುಂಡಿಗೆ 9 ವರ್ಷದ ಬಾಲಕ ಬಲಿ

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ದಾರುಣ ಘಟನೆ ನಡೆದಿದೆ. ಕೇವಲ 9 ವರ್ಷದ ಬಾಲಕನೊಬ್ಬ ತನ್ನ ತಮ್ಮನ ಕೈಯಿಂದ ಆಕಸ್ಮಿಕವಾಗಿ ಏರ್‌ಗನ್ ಗುಂಡಿಗೆ ಬಲಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಹಾವೇರಿ ಜಿಲ್ಲೆಯ ಹಾನಗಲ ಮೂಲದ ಕೂಲಿ ಕಾರ್ಮಿಕನ ಮಗನಾಗಿದ್ದ ಮೃತ ಬಾಲಕ, ತನ್ನ ತಮ್ಮ ಹಾಗೂ ಸ್ಥಳೀಯ ರೈತ ಗಣಪತಿ ಹೆಗಡೆ ಅವರ ಪುತ್ರಿಯೊಂದಿಗೆ ಆಟವಾಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಗಣಪತಿ ಹೆಗಡೆ ಅವರು ಕಾಡು ಮಂಗಗಳನ್ನು ಓಡಿಸಲು ಬಳಸುತ್ತಿದ್ದ ಏರ್‌ಗನ್‌ ಘಟನೆಗೆ ಕಾರಣವಾಗಿದೆ. ಮಕ್ಕಳ ನಡುವೆ ಜಗಳ ನಡೆಯುತ್ತಿದ್ದಾಗ, ಹೆಗಡೆ ಅವರು ಅವರನ್ನು ತಮ್ಮ ತೋಟದ ಕಡೆಗೆ ಕರೆಸಿಕೊಂಡರು. ಈ ವೇಳೆ ಸಿಸಿಟಿವಿ ದೃಶ್ಯದಲ್ಲಿ ಕಾಣುವಂತೆ, ಮೃತ ಬಾಲಕನ ತಮ್ಮ ಗನ್‌ನ ಟ್ರಿಗರ್ ಒತ್ತಿದಾಗ ಗುಂಡು ಕುತ್ತಿಗೆಗೆ ತಗುಲಿ ಬಾಲಕ ಸ್ಥಳದಲ್ಲೇ ಕುಸಿದು ಸಾವನ್ನಪ್ಪಿದ್ದಾನೆ.

ಅವಘಡದ ಮಾಹಿತಿ ತಿಳಿಯುತ್ತಿದ್ದಂತೆಯೇ ಶಿರಸಿ ಉಪವಿಭಾಗದ ಹೆಚ್ಚುವರಿ ಎಸ್ಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ರೈತ ಗಣಪತಿ ಹೆಗಡೆ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಗುಂಡು ಹಾರಿಸಿದ ಅಪ್ರಾಪ್ತ ಸಹೋದರ ಪ್ರಸ್ತುತ ಪೋಷಕರ ಜೊತೆ ಇದ್ದು, ಮಾನಸಿಕ ಆಘಾತದಿಂದ ಬಳಲುತ್ತಿರುವ ಕಾರಣ ವಿಚಾರಣೆ ಸಾಧ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

“ಇದು ಆಕಸ್ಮಿಕವಾಗಿ ಸಂಭವಿಸಿದ ದುರ್ಘಟನೆ ಎನಿಸಿದರೂ, ರೈತನ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಪ್ರಕರಣದ ತನಿಖೆ ಮುಂದುವರಿದಿದೆ. ಮೃತ ಬಾಲಕನ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದು,” ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅಪರಾಧ ರಾಷ್ಟ್ರೀಯ