ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿ ಭಾರತದಲ್ಲಿ ಅಧಿಕೃತವಾಗಿ ವಾಹನ ವಿತರಣೆಯನ್ನು ಇಂದು ಆರಂಭಿಸಿದೆ. ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಅವರು ಟೆಸ್ಲಾದ ಮೊದಲ ಗ್ರಾಹಕರಾಗಿ ‘ಮೋಡೆಲ್ ವೈ’ ಕಾರನ್ನು ಮುಂಬೈನ ಬಾಂದ್ರಾ ಕುರ್‌ಲಾ ಕಾಂಪ್ಲೆಕ್ಸ್‌ನಲ್ಲಿ ತೆರೆದ ಹೊಸ ಶೋರೂಮ್‌ನಲ್ಲಿ ಸ್ವೀಕರಿಸಿದರು.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ ಸರ್ನಾಯಕ್ ಅವರು, “ಯುವ ಪೀಳಿಗೆಯಲ್ಲೂ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಅರಿವು ಮೂಡಿಸಲು ನಾನು ಟೆಸ್ಲಾ ಖರೀದಿಸಿದ್ದೇನೆ. ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಇಂತಹ ವಾಹನಗಳನ್ನು ನೋಡಿದರೆ ಶಾಶ್ವತ ಸಾರಿಗೆ ಮಹತ್ವವನ್ನು ಅರಿತುಕೊಳ್ಳುತ್ತಾರೆ” ಎಂದು ಹೇಳಿದರು. ಅವರು ಈ ವಾಹನವನ್ನು ತಮ್ಮ ಮೊಮ್ಮಗನಿಗೆ ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದರು.

ಜುಲೈ ಮಧ್ಯದಲ್ಲಿ ಬುಕ್ಕಿಂಗ್ ಪ್ರಾರಂಭಿಸಿದ ನಂತರ ಭಾರತದಲ್ಲಿ ಇದುವರೆಗೆ ಕೇವಲ 600ಕ್ಕೂ ಹೆಚ್ಚು ಆರ್ಡರ್‌ಗಳು ಮಾತ್ರ ಸಿಕ್ಕಿವೆ. ಜಾಗತಿಕ ಮಟ್ಟದಲ್ಲಿ ಕೆಲವೇ ಗಂಟೆಗಳಲ್ಲಿ ಇಷ್ಟು ವಾಹನಗಳನ್ನು ಮಾರಾಟ ಮಾಡುವ ಟೆಸ್ಲಾ, ಈ ವರ್ಷ ಭಾರತಕ್ಕೆ 350ರಿಂದ 500 ಕಾರುಗಳನ್ನು ತರಲು ಯೋಜಿಸಿದೆ. ಮೊದಲ ಲಾಟು ಈಗಾಗಲೇ ಶಾಂಘೈಯಿಂದ ಸೆಪ್ಟೆಂಬರ್ ಆರಂಭದಲ್ಲಿ ಮುಂಬೈಗೆ ತಲುಪಿದೆ.
ಆರಂಭಿಕ ಹಂತದಲ್ಲಿ ವಿತರಣೆ ಮುಂಬೈ, ದೆಹಲಿ, ಪುಣೆ ಹಾಗೂ ಗುರುಗ್ರಾಮ್ ನಗರಗಳಿಗೆ ಮಾತ್ರ ಸೀಮಿತವಾಗಿರಲಿದೆ. “ವೆಚ್ಚ ಸ್ವಲ್ಪ ಹೆಚ್ಚು ಇದ್ದರೂ ಸರಿಯಾದ ಮಾದರಿ ತೋರಿಸುವುದು ಮತ್ತು ಇವಿ ಬಳಕೆಯನ್ನು ವೇಗಗೊಳಿಸುವುದು ಮುಖ್ಯ” ಎಂದು ಸರ್ಣಾಯಿಕ್ ಹೇಳಿದರು.
ಮಹಾರಾಷ್ಟ್ರ ಸರ್ಕಾರ ಈಗಾಗಲೇ ಅಟಲ್ ಸೇತು ಹಾಗೂ ಸಮೃದ್ಧಿ ಎಕ್ಸ್‌ಪ್ರೆಸ್‌ವೇಯಲ್ಲಿ ಇವಿಗಳಿಗೆ ಟೋಲ್ ವಿನಾಯಿತಿ ಘೋಷಿಸಿದೆ. ಜೊತೆಗೆ 5,000ಕ್ಕೂ ಹೆಚ್ಚು ವಿದ್ಯುತ್ ಬಸ್ಸುಗಳನ್ನು ಖರೀದಿಸಿದೆ.
ಇದಾದ ಬಳಿಕ ಟೆಸ್ಲಾ ಮುಂಬೈ ಹಾಗೂ ದೆಹಲಿಯಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುತ್ತಿದ್ದು, ದಕ್ಷಿಣ ಭಾರತದಲ್ಲೂ ಶೀಘ್ರದಲ್ಲೇ ಹೊಸ ಎಕ್ಸ್‌ಪೀರಿಯನ್ಸ್ ಸೆಂಟರ್ ತೆರೆಯಲು ಸಜ್ಜಾಗಿದೆ.

