ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ನೇಹಾ ಹಿರೇಮಠ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಫಯಾಜ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಧಾರವಾಡ ಹೈಕೋರ್ಟ್ ತಿರಸ್ಕರಿಸಿದೆ.

ಸುಮಾರು ಒಂದೂವರೆ ವರ್ಷಗಳಿಂದ ಧಾರವಾಡ ಕಾರಾಗೃಹದಲ್ಲಿರುವ ಫಯಾಜ್ ಪರ ವಕೀಲರು ಬಂಧನ ಪ್ರಕ್ರಿಯೆಯಲ್ಲಿನ ಲೋಪಗಳು ಹಾಗೂ ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ಜಾಮೀನು ನೀಡುವಂತೆ ಮನವಿ ಮಾಡಿದ್ದರು. ಇದಲ್ಲದೆ, ಇತ್ತೀಚೆಗೆ ಜಾಮೀನು ಪಡೆದ ನಟ ದರ್ಶನ್ ಪ್ರಕರಣದ ಮಾದರಿಯನ್ನು ಉಲ್ಲೇಖಿಸಿ ತಮ್ಮ ವಾದವನ್ನು ಮುಂದಿಟ್ಟಿದ್ದರು. ಆದರೆ ನ್ಯಾಯಾಲಯವು ಎಲ್ಲ ವಾದಗಳನ್ನು ತಿರಸ್ಕರಿಸಿ ಅರ್ಜಿಯನ್ನು ವಜಾಗೊಳಿಸಿದೆ.
2024ರ ಏಪ್ರಿಲ್ 18ರಂದು ಹುಬ್ಬಳ್ಳಿಯ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಆವರಣದಲ್ಲಿ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ (23) ಅವರನ್ನು ಆರೋಪಿ ಫಯಾಜ್ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ. ಪ್ರೇಮ ನಿರಾಕರಣೆ ಈ ಹತ್ಯೆಯ ಹಿನ್ನೆಲೆ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ಈ ಘಟನೆ ರಾಜ್ಯಾದ್ಯಂತ ಆಕ್ರೋಶ ಹುಟ್ಟಿಸಿತ್ತು. ವಿದ್ಯಾರ್ಥಿ ಸಂಘಟನೆಗಳು, ಮಹಿಳಾ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದವು. ಇದೀಗ ಹೈಕೋರ್ಟ್ ಫಯಾಜ್‌ನ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವುದರಿಂದ ನೇಹಾ ಕುಟುಂಬಕ್ಕೆ ಒಂದು ಮಟ್ಟಿನ ಸಮಾಧಾನ ದೊರೆತಿದೆ ಎಂದು ತಿಳಿದುಬಂದಿದೆ.

