ಭಾರತದ ತಂತ್ರಜ್ಞಾನ ಕ್ಷೇತ್ರದಲ್ಲಿ ಐತಿಹಾಸಿಕ ಹೆಜ್ಜೆ ಇಡಲಾಗಿದೆ. ದೇಶದ ಮೊದಲ ಸಂಪೂರ್ಣ ಸ್ವದೇಶಿ ನಿರ್ಮಿತ ವಿಕ್ರಮ್-32 ಬಿಟ್ ಪ್ರೊಸೆಸರ್ ಚಿಪ್ (Vikram 32-Bit Processor) ಅನ್ನು ಇಂದು ದೆಹಲಿಯಲ್ಲಿ ನಡೆದ ಸೆಮಿಕಾನ್ ಇಂಡಿಯಾ 2025 ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಹಸ್ತಾಂತರಿಸಿದರು.


ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸೆಮಿಕಂಡಕ್ಟರ್ ಲ್ಯಾಬೋರೇಟರಿ (SCL) ಅಭಿವೃದ್ಧಿಪಡಿಸಿರುವ ಈ ಚಿಪ್, ದೇಶದ ಮೊದಲ ಸ್ಥಳೀಯ 32-ಬಿಟ್ ಮೈಕ್ರೊಪ್ರೊಸೆಸರ್ ಆಗಿದ್ದು, ಬಾಹ್ಯಾಕಾಶ ಉಡಾವಣಾ ವಾಹನಗಳ ಕಠಿಣ ಪರಿಸ್ಥಿತಿಗಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ.
🔹 ಚಿಪ್ ವೈಶಿಷ್ಟ್ಯಗಳು:
- PSLV-C60 ಕಾರ್ಯಾಚರಣೆಯ ವೇಳೆ ವಿಕ್ರಮ್ 3201 ಘಟಕದ ಪ್ರಾಥಮಿಕ ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಂಡಿತ್ತು.
- 32-ಬಿಟ್ ವಿನ್ಯಾಸ ಹೊಂದಿರುವುದರಿಂದ ಡೇಟಾವನ್ನು 32 ಬಿಟ್‌ಗಳ ಬ್ಲಾಕ್‌ಗಳಲ್ಲಿ ಏಕಕಾಲದಲ್ಲಿ ಪ್ರಕ್ರಿಯೆಗೊಳಿಸಬಲ್ಲದು.
- ತೀವ್ರ ತಾಪಮಾನಗಳನ್ನು ಸಹಿಸುವ ಶಕ್ತಿ ಹೊಂದಿದ್ದು, ಬಾಹ್ಯಾಕಾಶ ಹಾರಾಟಕ್ಕೆ ಸೂಕ್ತವಾಗಿದೆ.
- ಉಪಗ್ರಹಗಳು ಮತ್ತು ಬಾಹ್ಯಾಕಾಶ ವಾಹನಗಳಿಗೆ ಅಗತ್ಯವಾದ ಸಂಕೀರ್ಣ ಸೂಚನೆಗಳನ್ನು ನಿರ್ವಹಿಸಬಲ್ಲದು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಅಶ್ವಿನಿ ವೈಷ್ಣವ್, ದೇಶದಲ್ಲಿ ಐದು ಹೊಸ ಸೆಮಿಕಂಡಕ್ಟರ್ ಘಟಕಗಳು ನಿರ್ಮಾಣ ಹಂತದಲ್ಲಿದ್ದು, ಆರು ರಾಜ್ಯಗಳಲ್ಲಿ 1.60 ಲಕ್ಷ ಕೋಟಿ ರೂ. ಹೂಡಿಕೆಯೊಂದಿಗೆ ಹತ್ತು ಪ್ರಮುಖ ಯೋಜನೆಗಳಿಗೆ ಅನುಮೋದನೆ ದೊರೆತಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿ, “ಜಗತ್ತು ಭಾರತವನ್ನು ನಂಬುತ್ತಿದೆ. ತೈಲವು ಕಳೆದ ಶತಮಾನದ ಕಪ್ಪು ಚಿನ್ನವಾಗಿದ್ದರೆ, ಈ ಶತಮಾನದ ಶಕ್ತಿ ಚಿಪ್‌ಗಳಲ್ಲಿದೆ. ಸೆಮಿಕಂಡಕ್ಟರ್‌ಗಳನ್ನು ‘ಡಿಜಿಟಲ್ ವಜ್ರಗಳು’ ಎಂದು ಕರೆಯಬಹುದು. 1.5 ಲಕ್ಷ ಕೋಟಿ ರೂ. ಮೀರಿದ ಹೂಡಿಕೆಗಳು ಭಾರತದ ಮೇಲೆ ವಿಶ್ವದ ವಿಶ್ವಾಸವನ್ನು ತೋರಿಸುತ್ತವೆ” ಎಂದರು.
👉 ಈ ಸಾಧನೆಯಿಂದ ಭಾರತವು ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ತನ್ನ ಸ್ಥಾನವನ್ನು ಬಲಪಡಿಸಿದೆ.

