ಬೆಂಗಳೂರು, ಸೆಪ್ಟೆಂಬರ್ 1: ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿ ಹಾಗೂ ಆರ್ಎಸ್ಎಸ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ನಡೆಸುತ್ತಿರುವ “ಧರ್ಮಸ್ಥಳ ಚಲೋ” ಕಾರ್ಯಕ್ರಮದ ಕುರಿತು ವಿಕಾಸಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, “ಇದು RSS ವಿರುದ್ಧ RSS ನಡುವಿನ ಜಗಳ” ಎಂದು ಕಿಡಿಕಾರಿದರು.

ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಅವರೇ ಮೊದಲು SIT ತನಿಖೆ ಬೇಡಿಕೊಂಡಿದ್ದರು ಎಂದು ನೆನಪಿಸಿದರು. “SIT ರಚನೆಯಾದ ಮೇಲೆ ಇವರು ಮೌನವಾಗಿದ್ದರು. ಈಗ ತನಿಖೆ ಸಾಗುತ್ತಿರುವ ಹೊತ್ತಿನಲ್ಲಿ ಏಕಾಏಕಿ ಜ್ಞಾನೋದಯ ಆಗಿದೆಯೇ, ಅಥವಾ ಯಾರಾದರೂ ಒತ್ತಡ ಹಾಕಿದ್ದಾರೇ?” ಎಂದು ಪ್ರಶ್ನಿಸಿದರು.
ಅವರು ಬಿಜೆಪಿ ನಾಯಕರನ್ನು ನೇರವಾಗಿ ಟಾರ್ಗೆಟ್ ಮಾಡುತ್ತಾ, “ಷಡ್ಯಂತ್ರವೆಂದು ಆರೋಪ ಮಾಡ್ತಿರುವವರು ಯಾರು? ಬಿಜೆಪಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಬಗ್ಗೆ ಮಾತಾಡ್ತಿದ್ದಾರೆ. ಇವರೇ ಯಾರು? ಇವರೆಲ್ಲಾ BJP, RSS ಬೆಳೆಸಿದ ಮುಖಂಡರು. RSSಗೆ ಗೊತ್ತಿಲ್ಲದೇ ಇಂತಹದ್ದೇನಾದರೂ ನಡೆಯುತ್ತದೆಯಾ?” ಎಂದು ಪ್ರತಿದಾಳಿ ನಡೆಸಿದರು.
ಧರ್ಮಸ್ಥಳ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿ ನಾಯಕರು RSS ಆಂತರಿಕ ಜಗಳವನ್ನು ಹೊರಗೆ ತಂದುಬಿಟ್ಟಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು.


