ಕತ್ರಾ, ಜಮ್ಮು-ಕಾಶ್ಮೀರದಲ್ಲಿ ಬುಧವಾರ ಭಾರಿ ಮಳೆಯಿಂದ ಮಾತಾ ವೈಷ್ಣೋ ದೇವಿ ಯಾತ್ರಾ ಮಾರ್ಗದಲ್ಲಿ ಭೂಕುಸಿತ ಸಂಭವಿಸಿ ಕನಿಷ್ಠ 30 ಮಂದಿ ಸಾವನ್ನಪ್ಪಿದ್ದು, 23 ಮಂದಿಗೆ ಗಾಯಗಳಾಗಿವೆ. ಇನ್ನೂ ಹಲವರು ಅವಶೇಷಗಳಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಮಂಗಳವಾರವೂ ಇದೇ ಮಾರ್ಗದಲ್ಲಿ ಭೂಕುಸಿತ ಸಂಭವಿಸಿ 9 ಮಂದಿ ಮೃತಪಟ್ಟಿದ್ದರು. ನಿರಂತರ ಮಳೆಯಿಂದ ಜಿಲ್ಲೆಯಲ್ಲಿ ಸೇತುವೆಗಳು ಕುಸಿದು, ವಿದ್ಯುತ್ ಮತ್ತು ಮೊಬೈಲ್ ಸಂಪರ್ಕ ಹಾನಿಗೊಳಗಾಗಿದೆ.
ಈವರೆಗೆ 3,500 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಜಿಲ್ಲಾಡಳಿತ, ಜಮ್ಮು-ಕಾಶ್ಮೀರ ಪೊಲೀಸ್, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಸೇನೆ ಹಾಗೂ ಸ್ಥಳೀಯರು ಸೇರಿಕೊಂಡಿದ್ದಾರೆ.
ಭಾರೀ ಮಳೆಯಿಂದ ಉತ್ತರ ರೈಲ್ವೆ 22 ರೈಲುಗಳನ್ನು ರದ್ದುಪಡಿಸಿ, 27 ರೈಲುಗಳನ್ನು ಮಧ್ಯದಲ್ಲೇ ನಿಲ್ಲಿಸಿದೆ. ಪಠಾಣ್ಕೋಟ್–ಕಂಡ್ರೋರಿ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಂಡಿದೆ.
ಹವಾಮಾನ ತಜ್ಞರ ಪ್ರಕಾರ, ಮಳೆಯ ಇನ್ನೂ ಮುಂದುವರಿಯುವ ಸಾಧ್ಯತೆ ಇದೆ.

