ಭೀಕರ ಕಾಲ್ತುಳಿತದ ಕಾರಣದಿಂದಾಗಿ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣ ಲಭ್ಯವಿಲ್ಲದ ಹಿನ್ನೆಲೆಯಲ್ಲಿ, ಮುಂಬೈ ನವಿ ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣವನ್ನು ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ಗೆ ಹೊಸ ಆತಿಥೇಯ ಮೈದಾನವಾಗಿ ಆಯ್ಕೆ ಮಾಡಲಾಗಿದೆ.

30 ಸೆಪ್ಟೆಂಬರ್ ರಿಂದ 2 ನವೆಂಬರ್ ವರೆಗೆ ನಡೆಯಲಿರುವ 13ನೇ ಆವೃತ್ತಿಯ ವಿಶ್ವಕಪ್ ವೇಳಾಪಟ್ಟಿಯನ್ನು ಐಸಿಸಿ ನವೀಕರಿಸಿದೆ. ಹೊಸ ವೇಳಾಪಟ್ಟಿಯ ಪ್ರಕಾರ, ನವಿ ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ಮೂರು ಲೀಗ್ ಪಂದ್ಯಗಳು, ಒಂದು ಸೆಮಿಫೈನಲ್ ಹಾಗೂ ಅಂತಿಮ ಪಂದ್ಯ (ಅಗತ್ಯವಿದ್ದಲ್ಲಿ) ನಡೆಯಲಿದೆ.
ಇತರೆ ಸ್ಥಳಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಗುವಾಹಟಿ ಎಸಿಎ ಕ್ರೀಡಾಂಗಣ, ಇಂದೋರ್ ಹೊಲ್ಕರ್ ಕ್ರೀಡಾಂಗಣ, ವಿಶಾಖಪಟ್ಟಣಂ ಎಸಿಎ-ವಿಡಿಸಿಎ ಕ್ರೀಡಾಂಗಣ ಮತ್ತು ಕೊಲಂಬೊ ಆರ್. ಪ್ರೇಮದಾಸ ಕ್ರೀಡಾಂಗಣ ಇದೇ ವೇಳಾಪಟ್ಟಿಯಂತೆ ಪಂದ್ಯಗಳನ್ನು ಆತಿಥ್ಯ ವಹಿಸಲಿವೆ.
ಮಹಿಳಾ ಕ್ರಿಕೆಟ್ಗೆ ನವಿ ಮುಂಬೈ ಈಗಾಗಲೇ ಪ್ರಮುಖ ವೇದಿಕೆಯಾಗಿ ರೂಪುಗೊಂಡಿದೆ. ಮಹಿಳಾ ಪ್ರೀಮಿಯರ್ ಲೀಗ್ ಹಾಗೂ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಇಲ್ಲಿ ಕಂಡುಬಂದ ಅಭಿಮಾನಿಗಳ ಬೆಂಬಲ ಆಟಗಾರ್ತಿಯರಿಗೆ ಹೆಚ್ಚುವರಿ ಶಕ್ತಿ ನೀಡಿದೆ. ಇದೇ ಉತ್ಸಾಹವು ವಿಶ್ವಕಪ್ನ ದೊಡ್ಡ ಪಂದ್ಯಗಳಲ್ಲಿ ಕಂಡುಬರಲಿದೆ ಎಂಬ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
“ಮಹಿಳಾ ಕ್ರಿಕೆಟ್ನ ಪಯಣದಲ್ಲಿ ಇದು ಮಹತ್ವದ ಘಟ್ಟ. ಈ ವಿಶ್ವಕಪ್ ಭವಿಷ್ಯದ ದಾರಿಯನ್ನು ತೋರಿಸುವ ಸ್ಮರಣೀಯ ಟೂರ್ನಮೆಂಟ್ ಆಗಿ ಉಳಿಯಲಿದೆ” ಎಂದು ಐಸಿಸಿ ತಿಳಿಸಿದೆ.
ಅಂತಿಮ ಪಂದ್ಯ ನವೆಂಬರ್ 2ರಂದು ಕೊಲಂಬೊ ಅಥವಾ ನವಿ ಮುಂಬೈಯಲ್ಲಿ ನಡೆಯಲಿದ್ದು, ಪ್ರಥಮ ಸೆಮಿಫೈನಲ್ ಅಕ್ಟೋಬರ್ 29ರಂದು ಗುವಾಹಟಿ ಅಥವಾ ಕೊಲಂಬೊದಲ್ಲಿ ಹಾಗೂ ದ್ವಿತೀಯ ಸೆಮಿಫೈನಲ್ ಅಕ್ಟೋಬರ್ 30ರಂದು ನವಿ ಮುಂಬೈಯಲ್ಲಿ ನಡೆಯಲಿದೆ.

