ನವದೆಹಲಿ: ವಿದೇಶಿ ಒತ್ತಡಗಳನ್ನು ಲೆಕ್ಕಿಸದೆ ದಿಟ್ಟ ವಾಣಿಜ್ಯ ನಿರ್ಧಾರಗಳನ್ನು ಕೈಗೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ದೇಶದಾದ್ಯಂತದ ರೈತರಿಂದ ಧನ್ಯವಾದಗಳ ಸುರಿಮಳೆ.

ದೆಹಲಿನಲ್ಲಿ ನಡೆದ ಸಭೆಯಲ್ಲಿ ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಹಲವಾರು ರೈತರು ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿಯಾಗಿ, ಸರ್ಕಾರದ ರೈತ ಹಿತದಾಯಕ ನೀತಿಗಳಿಗೆ ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚೌಹಾಣ್, ನಕಲಿ ರಸಗೊಬ್ಬರ ಮತ್ತು ರಾಸಾಯನಿಕ ಉತ್ಪಾದನೆ ಮಾಡುವವರ ವಿರುದ್ಧ ಕಠಿಣ ಕಾನೂನು ರೂಪಿಸಲಾಗುತ್ತಿದೆ ಎಂದು ಘೋಷಿಸಿದರು. ಜೊತೆಗೆ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರಿಗೆ ಡಿಜಿಟಲ್ ಪಾವತಿಯ ಮೂಲಕ ವಿಮಾ ಮೊತ್ತ ವಿತರಣೆ ಪ್ರಾರಂಭವಾಗಿರುವುದನ್ನು ಉಲ್ಲೇಖಿಸಿದರು.
“ರೈತರು ದಿನರಾತ್ರಿ ದುಡಿದು ಭಾರತಕ್ಕಷ್ಟೇ ಅಲ್ಲ, ಜಗತ್ತಿಗೂ ಅನ್ನ ಪೂರೈಸುತ್ತಾರೆ. ರೈತನ ಸೇವೆ ದೇವರ ಸೇವೆಯಷ್ಟೇ ಮಹತ್ವದ್ದಾಗಿದೆ” ಎಂದು ಅವರು ಕೊಂಡಾಡಿದರು.

