ದೆಹಲಿ ಬೀದಿ ನಾಯಿಗಳ ಸಮಸ್ಯೆ ಪರಿಹಾರಕ್ಕೆ ಕೋರ್ಟ್ ತುರ್ತು ಕ್ರಮ ಆದೇಶ: ಪರ – ವಿರೋಧ ಚರ್ಚೆ

ದೆಹಲಿ ಬೀದಿ ನಾಯಿಗಳ ಸಮಸ್ಯೆ ಪರಿಹಾರಕ್ಕೆ ಕೋರ್ಟ್ ತುರ್ತು ಕ್ರಮ ಆದೇಶ: ಪರ – ವಿರೋಧ ಚರ್ಚೆ

ದೆಹಲಿ ಹಾಗೂ ಸುತ್ತಮುತ್ತಲಿನ ನಗರ ಪ್ರದೇಶಗಳಲ್ಲಿ ಬೀದಿ ನಾಯಿಗಳ ಸಮಸ್ಯೆಯನ್ನು ತುರ್ತುವಾಗಿ ಪರಿಹರಿಸಲು ಸುಪ್ರೀಂ ಕೋರ್ಟ್ ಕಠಿಣ ಆದೇಶ ಹೊರಡಿಸಿದೆ. ಜಸ್ಟಿಸ್ ಜೆ.ಬಿ. ಪರ್ಡಿವಾಲಾ ಮತ್ತು ಆರ್. ಮಹಾದೇವನ್ ಅವರ ಪೀಠ, ಎಂಟು ವಾರಗಳೊಳಗೆ ಎಲ್ಲಾ ಬೀದಿ ನಾಯಿಗಳನ್ನು ಹಿಡಿದು ಶಾಶ್ವತವಾಗಿ ಶೆಲ್ಟರ್‌ಗಳಲ್ಲಿ ಇರಿಸುವಂತೆ ಮತ್ತು ಆಶ್ರಯ ಕೇಂದ್ರಗಳ ಸಾಮರ್ಥ್ಯವನ್ನು ತ್ವರಿತವಾಗಿ ವಿಸ್ತರಿಸುವಂತೆ ಮಹಾನಗರ ಪಾಲಿಕೆಗಳಿಗೆ ನಿರ್ದೇಶನ ನೀಡಿದೆ.

ದೆಹಲಿಯಲ್ಲಿ ವರ್ಷಕ್ಕೆ ಸುಮಾರು 30,000 ನಾಯಿಕಚ್ಚುವ ಪ್ರಕರಣಗಳು ದಾಖಲಾಗುತ್ತಿದ್ದು, ರೇಬಿಸ್‌ರಿಂದ ಬಡ ಜನರ ಜೀವಹಾನಿ ಮುಂದುವರಿದಿದೆ. ಈ ತೀರ್ಪು 2023ರ ಪ್ರಾಣಿ ಜನನ ನಿಯಂತ್ರಣ (ಎಬಿಸಿ) ನಿಯಮಗಳಿಗೆ ವಿರುದ್ಧವಾಗಿದೆ. ಆ ನಿಯಮಗಳು ನಾಯಿಗಳನ್ನು ಹಿಡಿದು, ಸಂತಾನ ಹರಣ ಹಾಗೂ ಲಸಿಕೆ ನೀಡಿದ ನಂತರ ಮತ್ತೆ ಅವರ ಪ್ರದೇಶಕ್ಕೆ ಬಿಡುವಂತೆ ಹಾಗೂ ಶಾಶ್ವತವಾಗಿ ಆಶ್ರಯದಲ್ಲಿ ಇರಿಸದಂತೆ ತಿಳಿಸಿವೆ.

ನಿಯಮಗಳ ಪ್ರಕಾರ ಆರೋಗ್ಯವಂತ ನಾಯಿಗಳನ್ನು ಶಾಶ್ವತವಾಗಿ ಸ್ಥಳಾಂತರಿಸಲು ಅವಕಾಶವಿಲ್ಲದಿದ್ದರೂ, ಪ್ರಸ್ತುತ ಪರಿಸ್ಥಿತಿಯಲ್ಲಿ ನಗರ ಪ್ರದೇಶಗಳಲ್ಲಿ ನಾಯಿಗಳ ಸಂಖ್ಯೆ ನಿಯಂತ್ರಣ ತಪ್ಪಿರುವುದಾಗಿ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಎಬಿಸಿ ನಿಯಮಗಳು ಕಾನೂನಾತ್ಮಕವಾಗಿ ಜಾರಿಯಲ್ಲಿದ್ದರೆ, ನಾಯಿಗಳನ್ನು ದೀರ್ಘಾವಧಿಗೆ ಆಶ್ರಯದಲ್ಲಿ ಇಡುವ ಅಧಿಕಾರಿಗಳಿಗೆ ಶಿಕ್ಷೆಯ ಭೀತಿ, ಮತ್ತೊಂದೆಡೆ ನ್ಯಾಯಾಲಯದ ಆದೇಶ ಪಾಲಿಸದಿದ್ದರೆ ಅವಮಾನ ಪ್ರಕರಣದ ಅಪಾಯ ಉಂಟಾಗಲಿದೆ.

ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಇಂದು, ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಬೀದಿ ನಾಯಿಗಳ ಸ್ಥಳಾಂತರ ವಿಚಾರವನ್ನು ಸುಪ್ರೀಂ ಕೋರ್ಟ್ ಪರಿಶೀಲಿಸಲಿದೆ ಎಂದು ಹೇಳಿದ್ದಾರೆ. ಈ ಹಿಂದೆ 2024ರಲ್ಲಿ ಜಸ್ಟಿಸ್ ಜೆ.ಕೆ. ಮಹೇಶ್ವರಿ ನೇತೃತ್ವದ ಪೀಠ, ಬೀದಿ ಪ್ರಾಣಿಗಳನ್ನು ಕೊಲ್ಲುವುದನ್ನು ನಿಷೇಧಿಸಿ, ಎಲ್ಲಾ ಜೀವಿಗಳ ಮೇಲಿನ ಕರುಣೆ ಸಂವಿಧಾನಾತ್ಮಕ ಮೌಲ್ಯ ಎಂದು ತೀರ್ಪು ನೀಡಿತ್ತು.

ತಜ್ಞರ ಅಭಿಪ್ರಾಯದಲ್ಲಿ, ಈಗಿನ ಕಾನೂನುಗಳು ನಗರಗಳ ಪ್ರಸ್ತುತ ಜನಸಾಂದ್ರತೆ ಮತ್ತು ಸಾರ್ವಜನಿಕ ಆರೋಗ್ಯದ ಸವಾಲುಗಳಿಗೆ ತಕ್ಕಂತೆ ಪರಿಷ್ಕರಣೆಗೊಳ್ಳಬೇಕಾಗಿದೆ. ಶೆಲ್ಟರ್‌ಗಳಲ್ಲಿ ಸಾಕಷ್ಟು ಸಿಬ್ಬಂದಿ, ಪಶುವೈದ್ಯರು ಮತ್ತು ಧನಸಹಾಯ ಒದಗಿಸಿದಾಗ ಮಾತ್ರ ದೆಹಲಿ ನಾಯಿಗಳ ಸಮಸ್ಯೆಯನ್ನು ದೀರ್ಘಾವಧಿಗೆ ಪರಿಹರಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಈ ವಿಚಾರವಾಗಿ ರಾಜ್ಯದಲ್ಲೂ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ರಾಜಕೀಯ ನಾಯಕರು, ಚಲನಚಿತ್ರ ನಟ ನಟಿಯರೂ ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಪರ-ವಿರೋಧ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಈ ಆದೇಶದಿಂದ ಬೀದಿ ನಾಯಿಗಳನ್ನು ಒಂದೆಡೆ ಕೂಡಿ ಹಾಕುವುದರಿಂದ ಅವುಗಳ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಾಗೆಯೇ ಈ ಆದೇಶ ಮುಂದೆ ದೇಶದ ಇತರೆ ನಗರಗಳಿಗೂ ಅನ್ವಯಿಸಲ್ಪಡುತ್ತದೆಯೇ ಎಂದು ಕಾದು ನೋಡಬೇಕಿದೆ.

ರಾಷ್ಟ್ರೀಯ