ನವದೆಹಲಿ, ಆಗಸ್ಟ್ 11 – ವಿಶ್ವದ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಮುಂಚೂಣಿ ಕಂಪನಿ ಟೆಸ್ಲಾ ಇಂದು ದೆಹಲಿಯ ಏರೋಸಿಟಿಯಲ್ಲಿ ತನ್ನ 2ನೇ ಭಾರತೀಯ ಶೋರೂಂ ಉದ್ಘಾಟಿಸಿದೆ. ಜುಲೈ 15ರಂದು ಮುಂಬೈನ ಬಾಂದ್ರಾ ಕುರ್‍ಲಾ ಕಾಂಪ್ಲೆಕ್ಸ್‌ನ ಮೇಕರ್ ಮ್ಯಾಕ್ಸಿಟಿ ಮಾಲ್‌ನಲ್ಲಿ ಪ್ರಥಮ ಶೋರೂಂ ಪ್ರಾರಂಭಿಸಿದ್ದ ಟೆಸ್ಲಾ, ಈಗ ಅಧಿಕೃತವಾಗಿ ಭಾರತದ ವೇಗವಾಗಿ ಬೆಳೆಯುತ್ತಿರುವ ಇವಿ ಮಾರುಕಟ್ಟೆಗೆ ಕಾಲಿಟ್ಟಿದೆ.

ಕಂಪನಿಯು ಮಧ್ಯಮ ಗಾತ್ರದ ಎಸ್‌ಯುವಿ – ಮಾಡಲ್ Y ಅನ್ನು ಭಾರತದ ಮೊದಲ ಮಾದರಿಯಾಗಿ ಪರಿಚಯಿಸಿದ್ದು, ಇದರ ಸ್ಟ್ಯಾಂಡರ್ಡ್ ಮಾದರಿ ₹60 ಲಕ್ಷ ಮತ್ತು ಲಾಂಗ್ ರೇಂಜ್ (LR) ಮಾದರಿ ₹68 ಲಕ್ಷ (ಎಕ್ಸ್-ಶೋರೂಮ್) ಬೆಲೆಯಲ್ಲಿ ಲಭ್ಯ. ಹೆಚ್ಚುವರಿ ₹6 ಲಕ್ಷಕ್ಕೆ ಫುಲ್ ಸೆಲ್ಫ್-ಡ್ರೈವಿಂಗ್ (FSD) ತಂತ್ರಜ್ಞಾನ ಪ್ಯಾಕೇಜ್‌ನ್ನು ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದು.
ಮಾಡಲ್ Y ಆರು ಬಣ್ಣಗಳಲ್ಲಿ ಲಭ್ಯವಾಗುತ್ತಿದ್ದು, ಸ್ಟೆಲ್ತ್ ಗ್ರೇ ಮೂಲ ಬೆಲೆಯಲ್ಲೇ ದೊರೆಯುತ್ತದೆ. ಪೆರ್ಲ್ ವೈಟ್, ಡೈಮಂಡ್ ಬ್ಲ್ಯಾಕ್, ಅಲ್ಟ್ರಾ ರೆಡ್, ಕ್ವಿಕ್‌ಸಿಲ್ವರ್ ಮತ್ತು ಗ್ಲೇಷಿಯರ್ ಬ್ಲೂ ಬಣ್ಣಗಳಿಗೆ ಹೆಚ್ಚುವರಿ ಶುಲ್ಕ ಅನ್ವಯಿಸುತ್ತದೆ. ಒಳಾಂಗಣ ಕಪ್ಪು ಅಥವಾ ಬಿಳಿ ಟ್ರಿಮ್‌ಗಳಲ್ಲಿ ಲಭ್ಯ.
ಸ್ಟ್ಯಾಂಡರ್ಡ್ ಮಾಡಲ್ Y 455 ಕಿಮೀ ಹಾಗೂ LR ಮಾದರಿ 622 ಕಿಮೀ ರೇಂಜ್ ಒದಗಿಸುತ್ತದೆ. 0 ರಿಂದ 100 ಕಿಮೀ/ಗಂ ವೇಗ ತಲುಪಲು ಕೇವಲ 5.6 ಸೆಕೆಂಡು ಬೇಕಾಗುತ್ತದೆ. ಸೂಪರ್‌ಚಾರ್ಜರ್ ತಂತ್ರಜ್ಞಾನದಿಂದ ಕೇವಲ 15 ನಿಮಿಷಗಳಲ್ಲಿ 267 ಕಿಮೀ ವರೆಗೆ ಚಾರ್ಜ್ ಸಾಧ್ಯ.
ಆರಾಮ ಮತ್ತು ತಂತ್ರಜ್ಞಾನದ ದೃಷ್ಟಿಯಿಂದ, ಹೀಟೆಡ್-ವೆಂಟಿಲೇಟೆಡ್ ಸೀಟುಗಳು, ಪವರ್-ಫೋಲ್ಡಿಂಗ್ ಹೀಟೆಡ್ ಹಿಂಬದಿ ಸೀಟುಗಳು, ಹ್ಯಾಂಡ್ಸ್-ಫ್ರೀ ಪವರ್ ಟ್ರಂಕ್, ಎಂಟು ಎಕ್ಸ್‌ಟೀರಿಯರ್ ಕ್ಯಾಮೆರಾಗಳೊಂದಿಗೆ ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ವ್ಯವಸ್ಥೆ ಇವುಗಳನ್ನು ಒಳಗೊಂಡಿದೆ.

