ರಿಜಿಸ್ಟರ್‌ ಪೋಸ್ಟ್‌ಗೆ ಗುಡ್‌ಬೈ: ಸೆಪ್ಟೆಂಬರ್ 1ರಿಂದ ಸ್ಪೀಡ್‌ಪೋಸ್ಟ್‌ ಜೊತೆ ವಿಲೀನಗೊಳ್ಳಲಿರುವ ರಿಜಿಸ್ಟರ್‌ ಪೋಸ್ಟ್‌ ಸೇವೆ

ರಿಜಿಸ್ಟರ್‌ ಪೋಸ್ಟ್‌ಗೆ ಗುಡ್‌ಬೈ: ಸೆಪ್ಟೆಂಬರ್ 1ರಿಂದ ಸ್ಪೀಡ್‌ಪೋಸ್ಟ್‌ ಜೊತೆ ವಿಲೀನಗೊಳ್ಳಲಿರುವ ರಿಜಿಸ್ಟರ್‌ ಪೋಸ್ಟ್‌ ಸೇವೆ

ನವದೆಹಲಿ: ಭಾರತೀಯ ಅಂಚೆ ಇಲಾಖೆ ತನ್ನ ಐಕಾನಿಕ್ ಸೇವೆಯೊಂದಾದ ರಿಜಿಸ್ಟರ್‌ ಪೋಸ್ಟ್‌ (Register Post) ಸೇವೆಯನ್ನು ಅಧಿಕೃತವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದೆ. 2025ರ ಸೆಪ್ಟೆಂಬರ್ 1ರಿಂದ ಈ ಸೇವೆ ಸಂಪೂರ್ಣವಾಗಿ ಸ್ಪೀಡ್‌ಪೋಸ್ಟ್‌ ಸೇವೆಯೊಂದಿಗೆ ಏಕೀಕೃತವಾಗಲಿದೆ ಎಂದು ಇಲಾಖೆಯು ಘೋಷಿಸಿದೆ.

ಅರ್ಧ ಶತಮಾನದಷ್ಟು ಕಾಲ ಜನಸಾಮಾನ್ಯರ ವಿಶ್ವಾಸಕ್ಕೆ ಪಾತ್ರವಾಗಿದ್ದ ರಿಜಿಸ್ಟರ್‌ ಪೋಸ್ಟ್‌ (Register Post) ಸೇವೆ, ತನ್ನ ನಿಖರತೆ, ಖರ್ಚು ತಗ್ಗುವಿಕೆ ಮತ್ತು ಕಾನೂನು ಮಾನ್ಯತೆಯಿಂದ ಹೆಸರಾಗಿತ್ತು. ಉದ್ಯೋಗ ಲೆಟರ್‌ಗಳು, ಕಾನೂನು ನೋಟಿಸ್‌ಗಳು, ಸರ್ಕಾರಿ ಪತ್ರವಹಿವಾಟುಗಳು ಮುಂತಾದ ನೂರಾರು ಮಹತ್ವದ ದಾಖಲೆಗಳನ್ನು ಸುರಕ್ಷಿತವಾಗಿ ತಲುಪಿಸುವಲ್ಲಿ ಇದು ಪ್ರಮುಖ ಪಾತ್ರವಹಿಸಿತು.

ಆದರೆ ಈಗ ಸ್ಪೀಡ್‌ಪೋಸ್ಟ್‌ ಸೇವೆಯೊಂದಿಗೆ ಈ ಸೇವೆಯನ್ನು ಲೀನಗೊಳಿಸುವ ಮೂಲಕ, ಅಂಚೆ ಇಲಾಖೆಯು ತನ್ನ ಕಾರ್ಯವಿಧಾನಗಳನ್ನು ನವೀಕರಿಸಲು ಮುಂದಾಗಿದೆ. 1986ರಲ್ಲಿ ಪ್ರಾರಂಭವಾದ ಸ್ಪೀಡ್‌ಪೋಸ್ಟ್‌ ಈಗ ಹೊಸ ತಂತ್ರಜ್ಞಾನದ ಸಹಾಯದಿಂದ ವೇಗವಾಗಿ ಹಾಗೂ ಅನುಕೂಲಕರವಾಗಿ ಸೇವೆ ನೀಡಲು ಸಜ್ಜಾಗಿದೆ.

ಈ ತೀರ್ಮಾನದ ಹಿನ್ನಲೆಯಲ್ಲಿ ಗ್ರಾಮೀಣ ಭಾರತದಲ್ಲಿ ವೆಚ್ಚದ ವಿಚಾರವಾಗಿ ಆತಂಕಗಳು ಉದ್ಭವಿಸಿದೆ.ರಿಜಿಸ್ಟರ್‌ ಪೋಸ್ಟ್‌ ಸೇವೆಯ ಕಡಿಮೆ ವೆಚ್ಚದ ವೈಶಿಷ್ಟ್ಯವನ್ನು ಬಳಸಿಕೊಂಡು ಅನೇಕರು ತಮ್ಮ ಅಧಿಕೃತ ದಾಖಲೆಗಳನ್ನು ಕಳುಹಿಸುತ್ತಿದ್ದರು.

ಅಂತಹ ಹಳೆಯ ಮತ್ತು ನೆನಪಿನ ಸೇವೆಗೆ ವಿದಾಯ ಹೇಳುವ ಈ ಘೋಷಣೆ, ದೇಶದ ಅಂಚೆ ಸೇವಾ ಇತಿಹಾಸದಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ.

ತಂತ್ರಜ್ಞಾನ ರಾಷ್ಟ್ರೀಯ