ಹುಬ್ಬಳ್ಳಿ, ಆಗಸ್ಟ್ 04: ರಾಜ್ಯದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ನೇಹಾ ಹಿರೇಮಠ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಈ ಪ್ರಕರಣದ ಆರೋಪಿ ಫಯಾಜ್ ಸಲ್ಲಿಸಿದ್ದ ಜಾಮೀನು ಅರ್ಜಿ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದವರು ಇಂದು ವಜಾ ಮಾಡಿದೆ. ಇದೇ ವೇಳೆ, ಆಗಸ್ಟ್ 6ರಂದು ಖುದ್ದು ಕೋರ್ಟ್ ಮುಂದೆ ಹಾಜರಾಗುವಂತೆ ಕಟ್ಟುನಿಟ್ಟಿನ ಆದೇಶವನ್ನೂ ನೀಡಿದ್ದಾರೆ.

2024ರ ಏಪ್ರಿಲ್ 18ರಂದು ಕಾಲೇಜಿನೊಳಗೆ ನುಗ್ಗಿ ವಿದ್ಯಾರ್ಥಿನಿ ನೇಹಾಳನ್ನು ಹತ್ಯೆಗೈದ ಆರೋಪದ ಮೇಲೆ ಫಯಾಜ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದುವರೆಗೆ ಕಾನ್ಫರೆನ್ಸ್ ಮೂಲಕ ಮಾತ್ರ ಕೋರ್ಟ್ ಮುಂದೆಯಿದ್ದಾನೆ. ಇದೀಗ ನ್ಯಾಯಾಲಯ ಖುದ್ದು ಹಾಜರಾತಿಗೆ ಸೂಚನೆ ನೀಡಿದೆ.
ಕೋರ್ಟ್ ಈ ಆದೇಶದ ಬೆನ್ನಲ್ಲೇ ನೇಹಾ ಹಿರೇಮಠ ಅವರ ತಂದೆ ನಿರಂಜನ ಹಿರೇಮಠ ಮಾಧ್ಯಮದೊಂದಿಗೆ ಮಾತನಾಡಿ, “ಇದು ನಮಗೆ ಮೊದಲ ಜಯ. ನೇಹಾ ಆತ್ಮಕ್ಕೆ ಶಾಂತಿ ಸಿಕ್ಕಿದಂತಾಗಿದೆ. ವಾಮಮಾರ್ಗದ ಮೂಲಕ ಜಾಮೀನು ಪಡೆಯಲು ಯತ್ನವಾಗುತ್ತಿತ್ತು. ಮತ್ತೆ ಯಾರೋಬ್ಬರನ್ನು ಕೊಲ್ಲುವ ಪ್ಲಾನ್ ಕೂಡಿದ್ದಿರಬಹುದೆನ್ನುವ ಅನುಮಾನವಿದೆ. ಈಗಾದರೂ ನ್ಯಾಯದ ಬೆಳಕು ಕಾಣುತ್ತಿದೆ. ಫಯಾಜ್‌ಗೆ ಬೇಗನೆ ಗಲ್ಲು ಶಿಕ್ಷೆ ಆಗಬೇಕು,” ಎಂದು ತಮ್ಮ ಭಾವನೆ ವ್ಯಕ್ತಪಡಿಸಿದರು