ಬೆಂಗಳೂರು, ಜುಲೈ 29: ಗುಜರಾತ್ ಎಂಟಿ-ಟೆರರಿಸ್ಟ್ ಸ್ಕ್ವಾಡ್ (ಎಟಿಎಸ್) ತಂಡವು ಭಯೋತ್ಪಾದಕ ಸಂಪರ್ಕ ಹೊಂದಿದ ಎಂಬ ಆರೋಪದಡಿ ಬೆಂಗಳೂರು ನಗರದಿಂದ 30 ವರ್ಷದ ಶಮಾ ಪರವೀನ್ ಎಂಬ ಮಹಿಳೆಯನ್ನು ಮಂಗಳವಾರ ಬಂಧಿಸಿದೆ.

ಬಂಧಿತ ಶಮಾ ಪರವೀನ್ ಜಾರ್ಖಂಡ್ ಮೂಲದವರಾಗಿದ್ದು, ಬೆಂಗಳೂರಿನ ಹೆಬ್ಬಾಳದ ಮನೋರಾಯಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಯುವಕರು ಭಯೋತ್ಪಾದಕ ಚಟುವಟಿಕೆಗಳತ್ತ ಆಕರ್ಷಿತರಾಗುವಂತಹ ಉಗ್ರತೆ ಒದಗಿಸುವ ವಿಷಯಗಳನ್ನು ಹಂಚಿಕೊಂಡಿದ್ದಾರೆ ಎಂಬ ಗಂಭೀರ ಆರೋಪಗಳಿವೆ.
ಬಂಧನದ ಬಳಿಕ ಶಮಾ ಪರವೀನ ಅವರನ್ನು ನಗರದ 8ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಬಳಿಕ ಗುಜರಾತ್ ಎಟಿಎಸ್ ತಂಡ ಟ್ರಾನ್ಸಿಟ್ ವಾರಂಟ್ ಪಡೆದು ಅವರನ್ನು ತನಿಖೆಗೆ ಗುಜರಾತ್‌ಗೆ ಕರೆದೊಯ್ದರು.
ಈ ಮಧ್ಯೆ, ಶಮಾ ಪರವೀನ್ ಅವರು ಬೆಂಗಳೂರಿನಲ್ಲಿ ಯಾರ ಜೊತೆ ಸಂಪರ್ಕ ಹೊಂದಿದ್ದರು ಎಂಬುದನ್ನು ಪತ್ತೆಹಚ್ಚುವ ದೃಷ್ಟಿಯಿಂದ ನಗರದ ಆಂತರಿಕ ಭದ್ರತಾ ವಿಭಾಗ ಹಾಗೂ ಸೆಂಟ್ರಲ್ ಕ್ರೈಮ್ ಬ್ರಾಂಚ್ (ಸಿಸಿ ಬಿ) ಇಲಾಖೆ ಸಮಗ್ರ ತನಿಖೆ ಆರಂಭಿಸಿದೆ.
ಘಟನೆ ಭದ್ರತಾ ಏಜೆನ್ಸಿಗಳಲ್ಲಿ ಆತಂಕದ ಸಂಗತಿಯಾಗಿ ಪರಿಗಣಿಸಲಾಗಿದ್ದು, ಈ ಪ್ರಕರಣದ ಬಗ್ಗೆ ಇನ್ನಷ್ಟು ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ.