ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕ್ಷೇತ್ರದ ಅಭಿವೃದ್ಧಿಗೆ ಮತ್ತೊಂದು ಹೆಜ್ಜೆ ಇಡಲಾಗಿದೆ. ಕಾರ್ಮಿಕರ ಮಕ್ಕಳ ಭವಿಷ್ಯ ನಿರ್ಮಾಣಕ್ಕೆ ಸಹಾಯ ಮಾಡುವ ಉದ್ದೇಶದಿಂದ, ಕರ್ನಾಟಕ ಸರ್ಕಾರ ಪುತ್ತೂರಿಗೆ ಕಾರ್ಮಿಕ ವಸತಿ ಶಾಲೆಯನ್ನು ಮಂಜೂರು ಮಾಡಿದೆ. ಈ ಯೋಜನೆಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ನಿರಂತರ ಪ್ರಯತ್ನ ನಡೆಸಿದ್ದರು. ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಿದ ಬಳಿಕ, ಕುರಿಯ ಗ್ರಾಮದಲ್ಲಿ 15 ಎಕರೆ ಭೂಮಿಯನ್ನು ಈ ಶಾಲೆಗೆ ಮೀಸಲಿಡಲಾಗಿದ್ದು, ಈಗ ಮಂಜೂರಾತಿಯ ರೂಪದಲ್ಲಿ ಫಲ ನೀಡಿದ

ಈ ವಸತಿ ಶಾಲೆಯಲ್ಲಿ 1ರಿಂದ 12ನೇ ತರಗತಿಯವರೆಗಿನ ಶಿಕ್ಷಣ ಸೌಲಭ್ಯ ಲಭ್ಯವಿದ್ದು, ಸುಮಾರು 1000 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡಲು ಅವಕಾಶ ಪಡೆಯಲಿದ್ದಾರೆ. ಇದು ಜಿಲ್ಲೆಯ ಅತಿದೊಡ್ಡ ಕಾರ್ಮಿಕ ವಸತಿ ಶಾಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಬಡ ಕಾರ್ಮಿಕರ ಮಕ್ಕಳಿಗೆ ಉಚಿತ ಹಾಗೂ ಗುಣಮಟ್ಟದ ಶಿಕ್ಷಣ ಒದಗಿಸಲು ಇದು ಮಹತ್ವದ ಹಾದಿ ತೆರೆದಿದೆ.
ಈ ಯಶಸ್ವಿ ಮಂಜೂರಾತಿಗೆ ಕಾರಣರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಅಶೋಕ್ ರೈ ಅಭಿನಂದನೆ ಸಲ್ಲಿಸಿದ್ದಾರೆ.