ಸೌಮ್ಯ ರೇಪ್‌ & ಮರ್ಡರ್‌ ಕೇಸ್‌ ಅಪರಾಧಿ ಗೋವಿಂದಚಾಮಿ ಕಣ್ಣೂರು ಜೈಲಿನಿಂದ ಪರಾರಿ

ಸೌಮ್ಯ ರೇಪ್‌ & ಮರ್ಡರ್‌ ಕೇಸ್‌ ಅಪರಾಧಿ ಗೋವಿಂದಚಾಮಿ ಕಣ್ಣೂರು ಜೈಲಿನಿಂದ ಪರಾರಿ

2011ರಲ್ಲಿ ಯುವತಿ ಸೌಮ್ಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಎದುರಿಸುತ್ತಿದ್ದ ಅಪರಾಧಿ ಗೋವಿಂದಚಾಮಿ ಅಲಿಯಾಸ್‌ ಚಾರ್ಲಿ ಥಾಮಸ್‌ ಕೇರಳದ ಕಣ್ಣೂರು ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದಾನೆ. ಈ ಘಟನೆ ಶುಕ್ರವಾರ (ಜುಲೈ 25) ಮುಂಜಾನೆ 1.15ರ ಸುಮಾರಿಗೆ ಸಂಭವಿಸಿದ್ದು, ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಜೈಲು ಅಧಿಕಾರಿಗಳು ಬೆಳಗಿನ ತಪಾಸಣೆಯಲ್ಲಿ ಈತ ಗೈರುಹಾಜರಾಗಿರುವುದನ್ನು ಪತ್ತೆ ಹಚ್ಚಿದರು.

ತಮಿಳುನಾಡಿನ ಕರೂರಿನ ನಿವಾಸಿಯಾಗಿರುವ ಗೋವಿಂದಚಾಮಿ, ಸೌಮ್ಯ ಎಂಬ ಯುವತಿಯನ್ನು ರೈಲಿನಲ್ಲಿ ಅತ್ಯಾಚಾರ ಮಾಡಿ, ಆಕೆಯನ್ನು ರೈಲಿನಿಂದ ಎಸೆದ ಕ್ರೂರ ಅಪರಾಧಕ್ಕಾಗಿ ಬಂಧಿತನಾಗಿದ್ದ. ಪ್ರಾರಂಭದಲ್ಲಿ ಮರಣದಂಡನೆ ವಿಧಿಸಲಾಗಿದ್ದರೂ, ಸುಪ್ರೀಂ ಕೋರ್ಟ್ ಶಿಕ್ಷೆಯನ್ನು ಜೀವಾವಧಿಗೆ ಇಳಿಸಿದ್ದರು. ಆತನು ಹೆಚ್ಚಿನ ಭದ್ರತೆಯ ಕಣ್ಗಾವಲು ಹೊಂದಿದ್ದ 10ನೇ ಬ್ಲಾಕ್‌ನ 4ನೇ ಸೆಲ್‌ನಲ್ಲಿ ಬಂಧಿತನಾಗಿದ್ದ.

ಗೋವಿಂದಚಾಮಿ ಪರಾರಿಯಾಗಿರುವ ರೀತಿ ಜೈಲು ಭದ್ರತೆಯ ವೈಫಲ್ಯವನ್ನು ಮುನ್ನೆಲೆಗೆ ತಂದಿದ್ದು, ಬಟ್ಟೆಗಳನ್ನು ಕಟ್ಟಿ ಗೋಡೆಯ ಮೇಲೆ ಇಳಿದಿರುವ ಅಂಶ ಜೈಲಿನಲ್ಲಿ ಕಂಡುಬಂದಿದೆ. ಈತನ ಪತ್ತೆಗೆ ಇದೀಗ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಎಲ್ಲಾ ಚೆಕ್‌ಪೋಸ್ಟ್‌ಗಳಿಗೆ ಎಚ್ಚರಿಕೆ ನೀಡಲಾಗಿದೆ. ಸಾರಿಗೆ ಕೇಂದ್ರಗಳು ಹಾಗೂ ಗಡಿ ಪ್ರದೇಶಗಳಲ್ಲಿ ಕಣ್ಗಾವಲು ಬಿಗಿಗೊಳಿಸಲಾಗಿದೆ.

ಈ ಭದ್ರತಾ ವೈಫಲ್ಯದಿಂದಾಗಿ ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಉನ್ನತ ಮಟ್ಟದ ಅಪರಾಧಿ ಹೇಗೆ ಪರಾರಿಯಾಗಲು ಸಾಧ್ಯವಾಯಿತು ಎಂಬುದರ ಕುರಿತು ತನಿಖೆ ನಡೆಸಬೇಕೆಂದು ಒತ್ತಾಯಿಸಲಾಗುತ್ತಿದೆ.

ಅಪರಾಧ ರಾಷ್ಟ್ರೀಯ