ಡಾಕಾ, ಜುಲೈ 21:
ಬಾಂಗ್ಲಾದೇಶದ ರಾಜಧಾನಿ ಡಾಕಾದ ಉತ್ತರ ಉಟ್ಟಾರಾ ಪ್ರದೇಶದಲ್ಲಿ ಇಂದು ಭೀಕರ ವಿಮಾನ ದುರಂತ ಸಂಭವಿಸಿದೆ. ಬಾಂಗ್ಲಾದೇಶ ವಾಯುಪಡೆಯ ಎಫ್-7 ಬಿಜಿಐ ತರಬೇತಿ ವಿಮಾನವೊಂದು ಮಿಲ್ಸ್ಟೋನ್ ಶಾಲೆ ಮತ್ತು ಕಾಲೇಜಿನ ಆವರಣದಲ್ಲಿ ಕುಸಿದು ಬಿದ್ದು ಹಲವಾರು ನಾಗರಿಕರು ಗಾಯಗೊಂಡಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ದುರ್ಘಟನೆಯ ಸಮಯದಲ್ಲಿ ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿ ಹಾಜರಿದ್ದು, ಪ್ರಾಣಹಾನಿಯ ಸಂಭವನೆ ವ್ಯಕ್ತವಾಗಿದೆ. ಮೃತಪಟ್ಟವರಲ್ಲಿ ಮಕ್ಕಳೂ ಸೇರಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.


ಸೇನಾ ಮತ್ತು ಅಗ್ನಿಶಾಮಕ ಇಲಾಖೆಯು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, ಬೆಂಕಿಯನ್ನು ನಂದಿಸುವಲ್ಲಿ ನಿರತರಾಗಿದ್ದಾರೆ. ಘಟನೆಯ ಬಗ್ಗೆ ಮಾತನಾಡಿದ ಬಾಂಗ್ಲಾದೇಶ ಸೇನೆಯ ಸಾರ್ವಜನಿಕ ಸಂಪರ್ಕ ವಿಭಾಗ, “ಕುಸಿದ ವಿಮಾನವು ವಾಯುಪಡೆಯ ಎಫ್-7 ಬಿಜಿಐ ತರಬೇತಿ ವಿಮಾನವಾಗಿದೆ” ಎಂಬುದಾಗಿ ಸ್ಪಷ್ಟಪಡಿಸಿದೆ.
ಘಟನೆಗೆ ಕಾರಣವೇನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ವಾಯುಪಡೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.