ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅಂಬರಗೋಡು-ಕಲಸವಳ್ಳಿ ನಡುವೆ ಶರಾವತಿ ಹಿನ್ನೀರಿಗೆ ನಿರ್ಮಿಸಲಾದ ಭಾರತದ ಎರಡನೇ ಉದ್ದದ ಕೇಬಲ್ ಸೇತುವೆ “ಸಿಗಂದೂರು ಸೇತುವೆ”ಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಜುಲೈ 14ರಂದು ಅಧಿಕೃತವಾಗಿ ಉದ್ಘಾಟಿಸಿದರು.


2.2 ಕಿ.ಮೀ ಉದ್ದದ ಈ ಸೇತುವೆ ₹473 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣವಾಗಿದೆ. ಇದು ಸಿಗಂದೂರಿನ ಪ್ರಸಿದ್ಧ ಚೌಡೇಶ್ವರಿ ದೇವಾಲಯ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ಸಂಪರ್ಕ ಸುಲಭಗೊಳಿಸುವ ಮಹತ್ತರ ಯೋಜನೆಯಾಗಿದೆ.
ಲಿಂಗನಮಕ್ಕಿ ಅಣೆಕಟ್ಟೆಯ ನಿರ್ಮಾಣದಿಂದ ಸುಮಾರು 60 ವರ್ಷಗಳ ಹಿಂದೆ ಈ ಭಾಗದ ಗ್ರಾಮಗಳು ರಸ್ತೆ ಸಂಪರ್ಕವನ್ನು ಕಳೆದುಕೊಂಡಿದ್ದವು. ಆಗಿನಿಂದ ನಾಡಿನ ಜನರು ದೋಣಿ ಹಾಗೂ ಲಾಂಚ್ ಮೂಲಕ ಸಾಗರಕ್ಕೆ ಪ್ರಯಾಣಿಸುತ್ತಿದ್ದರು. ರಾತ್ರಿ ಸಮಯ ಆಪತ್ಕಾಲದಲ್ಲಿ ಆರೋಗ್ಯ ಸೇವೆ ಸಹ ದೊರೆಯದ ಸ್ಥಿತಿ ನಿರ್ಮಾಣವಾಗಿತ್ತು.
21 ಮಂದಿ ಸಾವಿಗೀಡಾದ ದೋಣಿ ಅಪಘಾತದ ನಂತರದಿಂದ 45 ವರ್ಷಗಳ ಕಾಲ ಬಂದರು ಮತ್ತು ಒಳನಾಡು ನೀರಿನ ಸಾರಿಗೆ ಇಲಾಖೆ ಲಾಂಚ್ ಗಳನ್ನು ಚಲಾಯಿಸುತ್ತಿತ್ತು. ಆದರೆ ಜನರು ಹಗಲು ಮಾತ್ರ ಪ್ರಯಾಣಿಸಲು ಸಾಧ್ಯವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಲವಾರು ಬಾರಿ ಪ್ರತಿಭಟನೆಗಳು, ಪಾದಯಾತ್ರೆ ನಡೆಸಿ ಸೇತುವೆ ನಿರ್ಮಾಣದ ಒತ್ತಾಯ ಮಾಡಿದ್ದರು.





ಈ ಪ್ರಯತ್ನಗಳು 2018ರಲ್ಲಿ ಫಲಕೊಟ್ಟವು. ಆಗ ನಿತಿನ್ ಗಡ್ಕರಿ ಅವರು ಸೇತುವೆಯ ಶಂಕುಸ್ಥಾಪನೆ ನೆರವೇರಿಸಿದ್ದರು. ಈಗ ಈ ಸೇತುವೆ ಉದ್ಘಾಟನೆಯಾದ ಬೆನ್ನಲ್ಲೆ, ಸಾಗರದಿಂದ ಸಿಗಂದೂರಿಗೆ ಇರುವ 30 ಕಿ.ಮೀ ಓಡಾಟ ಕಡಿಮೆಯಾಗಲಿದ್ದು, ಸಾವಿರಾರು ಭಕ್ತರಿಗೆ ಅನುಕೂಲವಾಗಲಿದೆ.
ಉದ್ಘಾಟನೆ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.