ಕೇರಳದ ಕಣ್ಣೂರು ಜಿಲ್ಲೆಯ ಮತ್ತನ್ನೂರು ತಾಲ್ಲೂಕಿನ ಪೇರಿಂಚೇರಿ ಗ್ರಾಮದ ಶಿಕ್ಷಕರಾಗಿದ್ದ ಸಿ. ಸದಾನಂದ ಮಾಸ್ಟರ್ ಅವರು ಇಂದು ರಾಷ್ಟ್ರದ ಮೇಲ್ಮನೆಯಾದ ರಾಜ್ಯಸಭೆಗೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.


ಒಬ್ಬ ಸಾಮಾನ್ಯ ಶಿಕ್ಷಕರಾಗಿ ರಾಜಕೀಯ ತತ್ವದ ನಿಷ್ಠೆಯಲ್ಲಿ ಬದ್ಧರಾಗಿದ್ದ ಸದಾನಂದ ಮಾಸ್ಟರ್, 1994ರ ಜನವರಿಯಲ್ಲಿ ನಡೆದ ಭೀಕರ ರಾಜಕೀಯ ಹಲ್ಲೆಗೆ ಒಳಗಾದರು. ಸಿಪಿಐ(ಎಂ) ಪಕ್ಷದ ಗೂಂಡಾಗಳು ಜೀವಂತವಾಗಿದ್ದ ಸದಾನಂದ ಮಾಸ್ಟರ್‌ರ ಎರಡು ಕಾಲುಗಳನ್ನು ಕ್ರೂರವಾಗಿ ಕಡಿದು ಬಿಸಾಕಿದ್ರು. ಕೇವಲ ಭಿನ್ನ ರಾಜಕೀಯ ನಿಲುವಿನ ಕಾರಣಕ್ಕಾಗಿ ಈ ಅಮಾನುಷ ಕೃತ್ಯ ನಡೆಯಿತು. ಅವರ ಕಾಲುಗಳನ್ನು ಮರುಜೋಡಣೆ ಮಾಡದಂತೆ ಹಿಂಸಾಕಾರಿಗಳು ಸೆಗಣಿ, ಮಣ್ಣು, ಮರಳು ಹಚ್ಚಿದ ಕಾರಣದಿಂದ, ವೈದ್ಯಕೀಯ ಪುನಃಸ್ಥಾಪನೆಯ ಎಲ್ಲಾ ಮಾರ್ಗಗಳು ತಡೆಗಟ್ಟಲ್ಪಟ್ಟವು.
ಈ ದಾರಿ ಮಧ್ಯೆ ಅವರು ಬದುಕು ಉಳಿಸಿಕೊಂಡರೂ, ಹೋರಾಟವನ್ನು ಮಾತ್ರ ಬಿಡಲಿಲ್ಲ. ಶಾರೀರಿಕವಾಗಿ ಅಸಮರ್ಥನಾದರೂ ಮನಸ್ಸು ಗಟ್ಟಿಯಾಗಿ ನಿಂತ ಸದಾನಂದ ಮಾಸ್ಟರ್ ಅವರು ಕೃತಕ ಕಾಲುಗಳ ನೆರವಿನಿಂದ ಬದುಕನ್ನು ಪುನರ್‌ನಿರ್ಮಿಸಿಕೊಂಡರು. ತಮ್ಮ ಶಿಕ್ಷಕ ವೃತ್ತಿಯನ್ನು ಮುಂದುವರೆಸಿದ್ದು, ರಾಜಕೀಯ ತತ್ವದ ಹಾದಿಯಿಂದ ಹಿಂದೆ ಸರಿಯದೆ ಸೇವೆಯ ಮಾರ್ಗದಲ್ಲಿಯೇ ಮುಂದಿನ ಹಾದಿ ರೂಪಿಸಿಕೊಂಡರು.
2025ರ ಜುಲೈ 12ರಂದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ರಾಜ್ಯಸಭೆಗೆ ನಾಮನಿರ್ದೇಶಿತರಾಗಿ ಆಯ್ಕೆಯಾಗಿರುವ ಸಾದಾನಂದ ಮಾಸ್ಟರ್ ಅವರು, “ಸಮಾಜಸೇವೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸೇವೆಗೆ” ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಇದು ಕೇವಲ ರಾಜಕೀಯ ಯಶಸ್ಸು ಅಲ್ಲ, ಇಡೀ ಸಮಾಜಕ್ಕೆ ತೋರಿಸಿದ ತತ್ವ ನಿಷ್ಠೆಯ ಬಹುಮಾನವೂ ಆಗಿದೆ.
ತಮ್ಮ ಜೀವನದ ದುರ್ಘಟನೆಯೂ ಕೂಡ ಅವರನ್ನು ತಡೆದಿಲ್ಲ. ಅವರ ಧೈರ್ಯ, ಆತ್ಮವಿಶ್ವಾಸ ಮತ್ತು ತತ್ವನಿಷ್ಠೆ – ಇವುಗಳು ಸಾವಿರಾರು ಜನರಿಗೆ ಇಂದು ಪ್ರೇರಣೆಯಾಗಿವೆ.