ಬೆಂಗಳೂರು, ಜುಲೈ 14:ಖ್ಯಾತ ಬಹುಭಾಷಾ ಹಿರಿಯ ನಟಿ ಬಿ. ಸರೋಜಾ ದೇವಿ (87) ಅವರು ಇಂದು ಬೆಳಗ್ಗೆ ವಯೋಸಹಜ ಅನಾರೋಗ್ಯದಿಂದ ನಿಧನರಾದರು.


1955ರ “ಮಹಾಕವಿ ಕಾಳಿದಾಸ” ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸರೋಜಾ ದೇವಿ ಅವರು, “ಸ್ಕೂಲ್ ಮಾಸ್ಟರ್” (1958), “ಕಿತ್ತೂರು ಚೆನ್ನಮ್ಮ” (1961), “ಅಮರಶಿಲ್ಪಿ ಜಕಣಾಚಾರಿ” (1963), “ಮಲ್ಲಮ್ಮನ ಪಾವಡ” (1968) ಮುಂತಾದ ಹಲವಾರು ಶ್ರೇಷ್ಠ ಚಿತ್ರಗಳಲ್ಲಿ ನಟಿಸಿದರು.


ತಮಿಳು ಚಿತ್ರರಂಗದಲ್ಲಿಯೂ ಸಮಾನವಾಗಿ ಹೆಸರು ಮಾಡಿದ ಅವರು, ಎಂ.ಜಿ. ರಾಮಚಂದ್ರನ್ (ಎಂ.ಜಿ.ಆರ್) ಅವರೊಂದಿಗೆ 20 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. “ಪಲೂಮ್ ಪಳಮೂಮ್”, “ಅನ್ಬೇ ವಾ”, “ಎಂಗ ವೇಟು ಪಿಲ್ಲೈ” ಸೇರಿದಂತೆ ಹಲವಾರು ತಮಿಳು ಚಿತ್ರಗಳಲ್ಲಿ ಅವರು ಪ್ರಭಾವ ಮೂಡಿಸಿದ್ದರು.
ತೆಲುಗು ಚಿತ್ರರಂಗದಲ್ಲಿಯೂ ನಂದಮೂರಿ ತಾರಕರಾಮಾರಾವ್ ಅವರೊಂದಿಗೆ “ಸೀತಾರಾಮ ಕಲ್ಯಾಣಂ”, “ಜಗದೇಕವೀರುನಿ ಕಥಾ”, “ದಾಗುಡುಮೂತಲು” ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು.
ಹಿಂದಿ ಚಿತ್ರರಂಗದಲ್ಲಿಯೂ ದಿಲೀಪ್ ಕುಮಾರ್ (ಪೈಘಾಮ), ರಾಜೇಂದ್ರ ಕುಮಾರ್ (ಸಸುರಾಲ್), ಸುನೀಲ್ ದತ್ (ಬೇಟಿ ಬೇಟೆ) ಅವರೊಂದಿಗೆ ನಟಿಸಿ ಭಾರತೀಯ ಚಿತ್ರರಂಗದ ವೈವಿಧ್ಯಮಯ ಹಾದಿಯಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿದ್ದರು.
ಭಾರತ ಸರ್ಕಾರವು 1969ರಲ್ಲಿ ಪದ್ಮಶ್ರೀ, 1992ರಲ್ಲಿ ಪದ್ಮಭೂಷಣ ಗೌರವಗಳನ್ನು ನೀಡಿ ಅವರ ಸೇವೆಯನ್ನು ಗೌರವಿಸಿತ್ತು. 2008ರಲ್ಲಿ ಜೀವನ ಸಾಧನೆ ಪ್ರಶಸ್ತಿ ಅವರಿಗೆ ದೊರೆಯಿತು.