ದೆಹಲಿ ಮತ್ತು ಎನ್‌ಸಿಆರ್‌ನಲ್ಲಿ 4.1 ತೀವ್ರತೆಯ ಭೂಕಂಪ

ದೆಹಲಿ ಮತ್ತು ಎನ್‌ಸಿಆರ್‌ನಲ್ಲಿ 4.1 ತೀವ್ರತೆಯ ಭೂಕಂಪ

ದೆಹಲಿ, ಜುಲೈ 10 (ಗುರುವಾರ): ಇಂದು ಬೆಳಿಗ್ಗೆ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ವಲಯದಲ್ಲಿ (NCR) ಭೂಕಂಪ ಸಂಭವಿಸಿದ್ದು, ಜನರನ್ನು ಭೀತಿಗೊಳಿಸಿದೆ. ಬೆಳಿಗ್ಗೆ 9:00 ಗಂಟೆ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಭೂಕಂಪನದ ತೀವ್ರತೆ 4.1 ರಷ್ಟಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (National Center for Seismology) ತಿಳಿಸಿದೆ.

ಕೆಲವು ನಿಮಿಷಗಳ ಕಾಲ ದೆಹಲಿ, ಗುರುಗ್ರಾಮ್, ನೋಯ್ಡಾ, ಗಾಜಿಯಾಬಾದ್, ರೋಹ್ಟಕ್ ಹಾಗೂ ಜಜ್ಜರ್‌ ಸೇರಿದಂತೆ NCR ವ್ಯಾಪ್ತಿಯ ಹಲವೆಡೆ ಭೂಮಿ ಕಂಪಿಸಿದ ಅನುಭವವಾಯಿತು. ಭೂಕಂಪದ ಕೇಂದ್ರಬಿಂದು ಹರಿಯಾಣದ ಜಜ್ಜರ್‌ನಲ್ಲಿ ಗುರಾವಾರ ಎಂಬ ಸ್ಥಳದ ಬಳಿ, ಭೂಮಿಯಿಂದ 10 ಕಿಲೋಮೀಟರ್ ಆಳದಲ್ಲಿ ಪತ್ತೆಯಾಗಿದೆ. ಜೊತೆಗೆ, ಜಜ್ಜರ್‌ನಲ್ಲಿ 4.4 ತೀವ್ರತೆಯ ಮತ್ತೊಂದು ಭೂಕಂಪವೂ ದಾಖಲಾಗಿದೆ.

ಭೂಕಂಪದ ತೀವ್ರತೆಗೆ ಗೃಹೋಪಯೋಗಿ ವಸ್ತುಗಳು ನಡುಕಿದ ದೃಶ್ಯಗಳು ಕಂಡುಬಂದಿದ್ದು, ವಿಶೇಷವಾಗಿ ಫ್ಯಾನ್‌ಗಳು ಹಾಗೂ ಪಾತ್ರೆಗಳು ಅಲ್ಲಾಡಿದವು. ಈ ಹಿನ್ನೆಲೆಯಲ್ಲಿ ದೆಹಲಿಯ ನಿವಾಸಿಗಳು ಹಾಗೂ ನೌಕರರು ಭೀತಿಯಿಂದ ತಮ್ಮ ಮನೆಗಳು ಹಾಗೂ ಕಚೇರಿಗಳನ್ನು ತಾತ್ಕಾಲಿಕವಾಗಿ ತೊರೆದು ಸುರಕ್ಷಿತ ಸ್ಥಳಗಳತ್ತ ಓಡಿದರು.

ಕರ್ನಾಟಕ ಭವನ ಸೇರಿದಂತೆ ದೆಹಲಿಯ ಲೂಟೆನ್ಸ್ ವಲಯ, ನೋಯ್ಡಾ ಮತ್ತು ಗುರುಗ್ರಾಮ್‌ನ ಕಚೇರಿ ಪ್ರದೇಶಗಳಲ್ಲೂ ಭೂಕಂಪದ ಅನುಭವವಾಗಿದ್ದು, ಕಂಪ್ಯೂಟರ್‌ಗಳು ನಡುಕಿದ ದೃಶ್ಯಗಳು ದಾಖಲಾಗಿವೆ.

ಈ ಘಟನೆಯಲ್ಲಿ ಯಾವುದೇ ಸಾವು-ನೋವು ವರದಿಯಾಗಿಲ್ಲವಾದರೂ, ಭೂಕಂಪದ ಅನುಭವದಿಂದಾಗಿ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಉತ್ತರ ಪ್ರದೇಶ ಮತ್ತು ಪಂಜಾಬ್‌ನ ಕೆಲ ಭಾಗಗಳಲ್ಲಿಯೂ ಭೂಕಂಪದ ಅನುಭವವಾಗಿದೆ ಎಂದು ವರದಿಗಳು ತಿಳಿಸುತ್ತವೆ.

ರಾಷ್ಟ್ರೀಯ