ಬೆಂಗಳೂರು: ಭಾರತದ ಜಾವೆಲಿನ್ ಹಿರೋ ನೀರಜ್ ಚೋಪ್ರಾ ಅವರು ತಮ್ಮ ಹೆಸರಿನಲ್ಲೇ ನಡೆಯುತ್ತಿರುವ ಟೂರ್ನಿಯಾದ ನೀರಜ್ ಚೋಪ್ರಾ ಕ್ಲಾಸಿಕ್ 2025ನಲ್ಲಿ ಶನಿವಾರ ಬೆಂಗಳೂರು ನಗರದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಈ ಟೂರ್ನಿಯಲ್ಲಿ 86.18 ಮೀಟರ್ ಎಸೆತದೊಂದಿಗೆ ಸ್ವರ್ಣ ಪದಕ ಗೆದ್ದರು.

ನೀರಜ್, ಮೊದಲ ಎಸೆತದಲ್ಲಿ ಫೌಲ್ ಆದರೂ, ಆತ್ಮವಿಶ್ವಾಸ ಕಳೆದುಕೊಳ್ಳದೇ ಮೂರನೇ ಎಸೆತದಲ್ಲಿ ದಿನದ ಅತ್ಯುತ್ತಮ ದೂರ ಎಸೆದು ಎಲ್ಲರ ಕಣ್ಮನ ಸೆಳೆದರು. ನಂತರವೂ ಅವರು 84.07 ಮೀ ಮತ್ತು 82.22 ಮೀ ಎಸೆತಗಳ ಮೂಲಕ ತಮ್ಮ ಸ್ಥಿರತೆಯನ್ನೂ ತೋರಿಸಿದರು.
ಈ ಸ್ಪರ್ಧೆಯಲ್ಲಿ ಕೀನ್ಯಾದ ಜೂಲಿಯಸ್ ಯೆಗೋ ಅವರು 84.51 ಮೀ ಎಸೆತದೊಂದಿಗೆ ರಜತ ಪದಕ ಗಳಿಸಿದರೆ, ಶ್ರೀಲಂಕಾದ ರುಮೇಶ್ ಪಥಿರಾಜ್ ಅವರು 84.34 ಮೀ ಎಸೆತದಿಂದ ಕಂಚು ಪದಕ ಪಡೆದರು.