ರಾಜ್ಯಕ್ಕೆ ₹80,000 ಕೋಟಿ ಅನ್ಯಾಯ: ರಾಷ್ಟ್ರಪತಿ, ವಿತ್ತ ಸಚಿವರನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ

ರಾಜ್ಯಕ್ಕೆ ₹80,000 ಕೋಟಿ ಅನ್ಯಾಯ: ರಾಷ್ಟ್ರಪತಿ, ವಿತ್ತ ಸಚಿವರನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ

ದೆಹಲಿ, ಜೂನ್ 25:ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ, ರಾಜ್ಯದ ಬಾಕಿ ಬಿಲ್‌ಗಳು ಹಾಗೂ ಹಣಕಾಸು ಹಂಚಿಕೆಯ ಅಸಮತೋಲನ ಕುರಿತು ಚರ್ಚಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ಧರಾಮಯ್ಯ, ರಾಷ್ಟ್ರಪತಿಗೆ ಅನುಮೋದನೆಯಿಲ್ಲದೇ ಇರುವ ಏಳು ಬಿಲ್‌ಗಳ ಬಗ್ಗೆ ವಿವರ ನೀಡಿ, “ಆ ಬಿಲ್‌ಗಳನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಲಾಗಿದೆ ಎಂದು ರಾಷ್ಟ್ರಪತಿ ತಿಳಿಸಿದರು. ಅವುಗಳನ್ನು ತರಿಸಿ ಅನುಮೋದನೆ ನೀಡುವಂತೆ ಮನವಿ ಮಾಡಿದ್ದೇನೆ” ಎಂದು ಹೇಳಿದರು.

ಹಣಕಾಸು ಹಂಚಿಕೆ ಹಾಗೂ ಅನ್ಯಾಯ

ವರ್ಷದ ಹಿಂದೆ 16ನೇ ಹಣಕಾಸು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನು ಭೇಟಿಯಾಗಿದ್ದ ಸಿಎಂ, ಎರಡನೇ ಹೆಚ್ಚುವರಿ ಮನವಿಯನ್ನು ಸಲ್ಲಿಸಿದ್ದರ ಬಗ್ಗೆ ಉಲ್ಲೇಖಿಸಿದರು. ಅವರು ಹೇಳಿದರು:
“14ನೇ ಹಣಕಾಸು ಆಯೋಗದಲ್ಲಿ 4.7% ತೆರಿಗೆ ಹಂಚಿಕೆ ದೊರಕಿತ್ತಾದರೆ, 15ನೇ ಆಯೋಗದಲ್ಲಿ ಅದು 3.6% ಕ್ಕೆ ಇಳಿದಿದೆ. ಶೇಕಡಾ 1.1% ಕಡಿತದಿಂದ ಶೇ. 23 ರಷ್ಟು ಹಣಕಾಸು ಕಡಿತವಾಗಿದೆ. ಇದರಿಂದ ರಾಜ್ಯಕ್ಕೆ 5 ವರ್ಷಗಳಲ್ಲಿ ₹80,000 ಕೋಟಿ ನಷ್ಟವಾಗಿದೆ. ಕೇವಲ ತೆರಿಗೆ ಹಂಚಿಕೆಯಲ್ಲಿ ಮಾತ್ರವೇ ರಾಜ್ಯಕ್ಕೆ ₹63 ಸಾವಿರ ಕೋಟಿ ಅನ್ಯಾಯವಾಗಿದೆ.”

“ಕರ್ನಾಟಕದ ಜನಸಂಖ್ಯೆ ರಾಷ್ಟ್ರದ 5% ಆದರೆ, ನಾವು 8.7% ಜಿಡಿಪಿಗೆ ಕೊಡುಗೆ ನೀಡುತ್ತೇವೆ. 2011-12 ರಲ್ಲಿ 7.6% ಇದ್ದ ಜಿಡಿಪಿ ಕೊಡುಗೆ, ಇಂದು 8.7% ಆಗಿದೆ. ಜಿಎಸ್‌ಟಿ ಸಂಗ್ರಹದಲ್ಲಿ ರಾಜ್ಯದ ಸ್ಥಾನ ಎರಡನೆಯದು; ಜಿಡಿಪಿಯಲ್ಲಿ ಮೂರನೆಯದು. ಈ ಎಲ್ಲಾ ಅಂಶಗಳನ್ನು ಕೇಂದ್ರ ಸರ್ಕಾರ ಗಮನದಲ್ಲಿಟ್ಟುಕೊಳ್ಳಬೇಕು,” ಎಂದರು.

“ಬೇಂದ್ರೆ ಪೆರಿಫೆರಲ್ ರಿಂಗ್ ರೋಡ್‌ಗೆ ₹3,000 ಕೋಟಿ, ಕೆರೆಗಳ ಅಭಿವೃದ್ಧಿಗೆ ₹3,000 ಕೋಟಿಗೆ ಸೇರಿಸಿ ₹11,495 ಕೋಟಿ ಘೋಷಣೆ ಮಾಡಲಾಗಿತ್ತು. ಆದರೆ ಇದು ಇನ್ನೂ ಲಭಿಸಿಲ್ಲ. ಮಲೆನಾಡು, ಪಶ್ಚಿಮ ಘಟ್ಟ ಪ್ರದೇಶ ಹಾಗೂ ಕಲ್ಯಾಣ ಕರ್ನಾಟಕ ಭಾಗಗಳಿಗೂ ವಿಶೇಷ ಅನುದಾನ ಬೇಕಾಗಿದೆ. ಬೆಂಗಳೂರನ್ನು ಜಾಗತಿಕ ನಗರವನ್ನಾಗಿಸಲು ₹1.15 ಲಕ್ಷ ಕೋಟಿ ಅನುದಾನ ಅಗತ್ಯವಿದೆ,” ಎಂದು ಅವರು ಹೇಳಿದರು.

ಅನುದಾನ ವಿತರಣೆಯ ನ್ಯಾಯ ವಿಚಾರ:

“ತಲಾವಾರು ಆದಾಯ ಮಾನದಂಡ ಶೇ. 45ರಿಂದ ಶೇ. 20ಕ್ಕೆ ಇಳಿಸಬೇಕು. ಕೇರಳ, ಆಂಧ್ರ, ತಮಿಳುನಾಡುಗಳಿಗೆ ನೀಡಿರುವ ಆದಾಯ ಕೊರತೆ ಅನುದಾನವನ್ನು ಕರ್ನಾಟಕಕ್ಕೂ ನೀಡಬೇಕು. ಇಲ್ಲವೇ ಯಾರಿಗೂ ನೀಡಬಾರದು. ನಾವು ರಾಜಸ್ವ ಹೆಚ್ಚಳದ ರಾಜ್ಯವಾಗಿದ್ದರೂ ಇದೀಗ ವಿತ್ತೀಯ ಕೊರತೆಯಲ್ಲಿದ್ದೇವೆ. ಹಣಕಾಸಿನ ನಿಯಮಾನುಸಾರ ನಡೆಯದ ರಾಜ್ಯಗಳಿಗೆ ಅನುದಾನ ನೀಡುವುದು ನ್ಯಾಯವಲ್ಲ,” ಎಂದು ಸಿಎಂ ಹೇಳಿದರು.

ಕೇಂದ್ರದ ಭರವಸೆ:

“ಈ ಕುರಿತು ನಾನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ್ದೇನೆ. ಅವರು ನಮ್ಮ ಮನವಿಗೆ ಸ್ಪಂದನೆ ನೀಡಿದ್ದು, ರಾಜ್ಯಕ್ಕೆ ಅನ್ಯಾಯವಾಗಿದ್ದರೆ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ,” ಎಂದು ಸಿಎಂ ಸಿದ್ಧರಾಮಯ್ಯ ಸ್ಪಷ್ಟಪಡಿಸಿದರು.

ರಾಜ್ಯ ರಾಷ್ಟ್ರೀಯ