
ಬಲೂಚಿಸ್ಥಾನ, ಪಾಕಿಸ್ಥಾನ: ಬಲೂಚಿಸ್ತಾನದ ಚಾಗೈ ಜಿಲ್ಲೆಯ ನುಷ್ಕಿಯಿಂದ ಬಂದ 25 ವರ್ಷದ ಕಶಿಷ್ ಚೌಧರಿ, ಪ್ರಾಂತ್ಯದಲ್ಲಿ ಮೊದಲನೇ ಹಿಂದೂ ಮಹಿಳಾ ಸಹಾಯಕ ಆಯುಕ್ತರಾಗಿ ನೇಮಕಗೊಂಡಿದ್ದಾರೆ. ಈ ನೇಮಕಾತಿ ಪ್ರಾಂತೀಯ ನಾಗರಿಕ ಸೇವೆಯಲ್ಲಿ ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಪ್ರತಿನಿಧಿತ್ವವನ್ನು ಹೆಚ್ಚಿಸುವತ್ತ ಮಹತ್ವದ ಹೆಜ್ಜೆಯಾಗಿದೆ.


ಚೌಧರಿ ಬಲೂಚಿಸ್ಥಾನ ಪಬ್ಲಿಕ್ ಸರ್ವಿಸ್ ಕಮಿಷನ್ (BPSC) ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದು, ಈ ಗೌರವಾನ್ವಿತ ಸ್ಥಾನಕ್ಕೆ ಬಂದಿದ್ದಾರೆ. ಈ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಗಾಗಿ ಅವರು ಮೂರು ವರ್ಷಗಳ ಕಾಲ ದಿನಕ್ಕೆ ಎಂಟು ಗಂಟೆಗಳವರೆಗೆ ಅಧ್ಯಯನ ಮಾಡಿದ್ದರು. “ಶಿಸ್ತಿನ ಜೀವನ, ಕಠಿಣ ಪರಿಶ್ರಮ ಮತ್ತು ನನ್ನ ಸಮುದಾಯದ ಸೇವೆ ಎಲ್ಲವೂ ನನ್ನನ್ನು ಮುನ್ನಡೆಸಿದವು,” ಎಂದು ಅವರು ಹೇಳಿದ್ದಾರೆ.
ಈ ನೇಮಕಾತಿ ಪ್ರಾಂತ್ಯದಲ್ಲಿ ಅಲ್ಪಸಂಖ್ಯಾತರು ಮತ್ತು ಮಹಿಳೆಯರಿಗೆ ಸರ್ಕಾರದ ಹುದ್ದೆಗಳಲ್ಲಿ ಸ್ಥಾನ ನೀಡಲು ಒಂದು ಪ್ರೇರಣೆಯಾಗಿದೆ ಎಂದು ಪ್ರಾಂತೀಯ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಲೂಚಿಸ್ಥಾನದ ಮುಖ್ಯಮಂತ್ರಿಗಳು ಚೌಧರಿಯ ಸಾಧನೆಯನ್ನು ಶ್ಲಾಘಿಸಿದ್ದು, ಇತರ ಯುವ ಮಹಿಳೆಯರಿಗೆ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಪ್ರೇರಣೆಯಾಗುವಂತಿದೆ ಎಂದು ಹೇಳಿದ್ದಾರೆ.
ಶೈಕ್ಷಣಿಕ ಮತ್ತು ವೃತ್ತಿ ಜೀವನದಲ್ಲಿ ತನ್ನ ಕುಟುಂಬ ಮತ್ತು ಗುರುಗಳಿಂದ ಪಡೆದ ಬೆಂಬಲಕ್ಕೆ ಚೌಧರಿ ಕೃತಜ್ಞತೆ ವ್ಯಕ್ತಪಡಿಸಿದರು. ಬಲೂಚಿಸ್ಥಾನದ ಜನರಿಗೆ, ವಿಶೇಷವಾಗಿ ಹಿಂದುಳಿದ ಪ್ರದೇಶದ ಜನರಿಗೆ ಸೇವೆ ಸಲ್ಲಿಸುವ ದೃಢ ಸಂಕಲ್ಪವನ್ನು ಅವರು ವ್ಯಕ್ತಪಡಿಸಿದ್ದಾರೆ.
ಕಶಿಷ್ ಚೌಧರಿಯ ಈ ಮಹತ್ವದ ಸಾಧನೆ ಅಲ್ಪಸಂಖ್ಯಾತರು ಮತ್ತು ಮಹಿಳೆಯರಿಗೆ ಹೊಸ ಹುರುಪು ಮತ್ತು ಉತ್ತೇಜನವನ್ನು ನೀಡಲಿದೆ. ಇದು ಪಾಕಿಸ್ತಾನದ ಸಾರ್ವಜನಿಕ ವಲಯದಲ್ಲಿ ಹೆಚ್ಚುವರಿ ಪ್ರತಿನಿಧಿತ್ವಕ್ಕೆ ದಾರಿ ತೋರಿಸುವ ಮೂಲಕ ಇತರ ಯುವತಿಯರು ಮತ್ತು ಅಲ್ಪಸಂಖ್ಯಾತ ಸಮುದಾಯದವರಿಗೆ ಪ್ರೇರಣೆಯಾದಂತಾಗಿದೆ.