
ನವದೆಹಲಿ: 2025 ರ ಏಪ್ರಿಲ್ 20, ಭಾನುವಾರ, ಆರ್ಮಿ ಹಾಸ್ಪಿಟಲ್ (ರಿಸರ್ಚ್ & ರೆಫರಲ್), ನವದೆಹಲಿಯಲ್ಲಿ ನಡೆದ ಮೊದಲನೇ ಸೊಲ್ಜರ್ ಥಾನ್ ಕಾರ್ಯಕ್ರಮದಲ್ಲಿ 5,000 ಕ್ಕೂ ಹೆಚ್ಚು ಮಂದಿ ಭಾಗವಹಿಸಿ ದೇಶದ ವೀರ ಸೈನಿಕರಿಗೆ ತಮ್ಮ ಗೌರವವನ್ನು ಸಲ್ಲಿಸಿದರು. ಈ ವರ್ಷ ಮೊದಲ ಬಾರಿಗೆ ಆಯೋಜಿಸಲಾದ ಈ ಕಾರ್ಯಕ್ರಮದ ಮೂಲ ಮಂತ್ರ “ಸೈನಿಕರಿಗಾಗಿ ಓಟ, ಸೈನಿಕರ ಜೊತೆಗೆ ಓಟ.”

ಈ ಕಾರ್ಯಕ್ರಮವನ್ನು ಆರ್ಮಿ ಹಾಸ್ಪಿಟಲ್ (R&R) ಹಾಗೂ ಫಿಟಿಸ್ತಾನ್ – ಏಕ್ ಫಿಟ್ ಭಾರತ್ ಎಂಬ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿತ್ತು. ಇದರಲ್ಲಿ ನಿವೃತ್ತ ಯೋಧರು, ಸೇವೆಯಲ್ಲಿರುವ ಯೋಧರು, ವಿದ್ಯಾರ್ಥಿಗಳು, ಸಾರ್ವಜನಿಕರು ಮತ್ತು ಫಿಟ್ನೆಸ್ ಆಸಕ್ತರು ಭಾಗವಹಿಸಿದ್ದರು. ಇದು ದೇಶಪ್ರೇಮ, ಏಕತೆ ಮತ್ತು ಆರೋಗ್ಯದ ಮಹತ್ವವನ್ನು ಸಾರುವ ಕಾರ್ಯಕ್ರಮವಾಗಿತ್ತು.
ಈ ಮ್ಯಾರಥಾನ್‌ನಲ್ಲಿ 10 ಕಿಮೀ ನಿಗದಿತ ಸಮಯದಲ್ಲಿ ನಡೆಯುವ ಓಟ, 5 ಕಿಮೀ ಮೋಜಿನ ಓಟ, ಮತ್ತು 3 ಕಿಮೀ ನಡೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ವಿಭಾಗಗಳನ್ನು ಎಲ್ಲರೂ ಭಾಗವಹಿಸುವಂತೆ ಸಿದ್ಧಪಡಿಸಲಾಗಿತ್ತು. ಜನರು ಭಾರತೀಯ ಯೋಧರ ಜೊತೆ ಓಡಿ, ಅನುಭವ ಪಡೆದು, ಅವರ ಶಿಸ್ತು ಮತ್ತು ಸಮರ್ಪಣೆಯಿಂದ ಪ್ರೇರಿತರಾದರು.

ಸೋಲ್ಜರ್ ಥಾನ್ 2025 ಕಾರ್ಯಕ್ರಮವನ್ನು ಮಿಜೋರಾಂ ರಾಜ್ಯಪಾಲ ಜನರಲ್ (ಡಾ) ವಿಕೆ ಸಿಂಗ್ (ನಿವೃತ್ತ) ಅವರು ಉದ್ಘಾಟಿಸಿದರು. ಅವರೊಂದಿಗೆ ನೌಕಾ ಸೇನಾ ಮುಖ್ಯಸ್ಥರು, ಸೇನೆಯ ಉಪಮುಖ್ಯಸ್ಥರು, ಭೂಸೇನೆಯ ವೈದ್ಯಕೀಯ ಸೇವೆಗಳ ಮಹಾನಿರ್ದೇಶಕರು, ದೆಹಲಿಯ ಪ್ರಾದೇಶಿಕ ಜನರಲ್ ಆಫಿಸರ್ ಕಮಾಂಡಿಂಗ್, ಡಿಜಿಎಂಎಸ್ (ನೌಕಾಸೇನೆ), ಡಿಜಿಎಂಎಸ್ (ವಾಯುಸೇನೆ), ಆರ್ಮಿ ಹಾಸ್ಪಿಟಲ್ (R&R) ನ ಕಮಾಂಡಂಟ್ ಮುಂತಾದ ಪ್ರಮುಖ ರಕ್ಷಣಾ ಅಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದ ಸ್ಥಳವು ದೇಶಭಕ್ತಿ ಹಾಗೂ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು.

ಪುಣೆಯ ಕಿರ್ಕೀ ಪ್ರದೇಶದಲ್ಲಿರುವ ಪ್ಯಾರಾಪ್ಲೇಜಿಕ್ ಪುನರ್ವಸತಿ ಕೇಂದ್ರಕ್ಕೆ ನಿಧಿ ಸಂಗ್ರಹ ಮಾಡುವ ಸದುದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕೇಂದ್ರದಲ್ಲಿ ದೇಶಸೇವೆ ಮಾಡುತ್ತಾ ಗಾಯಗೊಂಡ ಯೋಧರಿಗೆ ವಿಶೇಷ ಚಿಕಿತ್ಸೆಗಳು, ಪುನರ್ಶಿಕ್ಷಣ ಮತ್ತು ನೆರವು ಒದಗಿಸಲಾಗುತ್ತದೆ.
ಮೊದಲ ಬಾರಿಗೆ ನಡೆದ ಈ ರೀತಿಯ ಕಾರ್ಯಕ್ರಮದ ಭಾರೀ ಸ್ಪಂದನೆ, ನಾಗರೀಕರು ಮತ್ತು ಸೇನೆ ನಡುವೆ ಇರುವ ಬಲವಾದ ನಂಟನ್ನು ತೋರಿಸಿತು. ನಮ್ಮ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ಯೋಧರಿಗೆ ಬೆಂಬಲ ನೀಡಬೇಕೆಂಬ ಭಾವನೆ ಎಲ್ಲರಲ್ಲೂ ಪುಟಿದೆದ್ದಿತು. ದೇಶಪ್ರೇಮ ಜಾಗೃತವಾಯಿತು.
ಸೋಲ್ಜರ್ಥಾನ್ 2025 “ನಾಗರಿಕರು ಮತ್ತು ಸೈನಿಕರು ಒಟ್ಟಾಗಿ ಓಡಿದಾಗ, ಆ ಓಟವು ಒಂದು ಆರೋಗ್ಯವರ್ಧಕ ಚಟುವಟಿಕೆಯಷ್ಟೇ ಆಗಿರದೇ, ದೇಶದ ಏಕತೆ ಮತ್ತು ಶಕ್ತಿಯ ಸಂಕೇತವೂ ಆಗುತ್ತದೆ” ಎಂಬ ಸಂದೇಶವನ್ನೂ ಲೋಕಕ್ಕೆ ಸಾರಿತು.
