
ಮುಂಬೈ: ಡಾಬರ್ ಇಂಡಿಯಾ ಲಿಮಿಟೆಡ್ ತನ್ನ ಡಾಬರ್ ಮಿಸ್ವಾಕ್ ಮತ್ತು ಡಾಬರ್ ತುಳಸಿ ಆಂಟಿ-ಬ್ಯಾಕ್ಟೀರಿಯಲ್ ಟೂತ್ ಪೇಸ್ಟ್ ಉತ್ಪನ್ನಗಳ ಲೇಬಲ್ ಗಳಲ್ಲಿ ಇರುವ “ನೋವು ನಿವಾರಕ” ಮತ್ತು “ಬ್ಯಾಕ್ಟೀರಿಯ ನಿವಾರಕ” ಎಂಬ ಹೇಳಿಕೆಗಳನ್ನು ಜೂನ್ 2025ರಿಂದ ಹಿಂತೆಗೆದುಕೊಳ್ಳುವುದಾಗಿ ಹೇಳಿದೆ.

ನ್ಯಾಯಾಲಯದ ಹಸ್ತಕ್ಷೇಪ ಮತ್ತು ಡಾಬರ್ ನಿರ್ಧಾರ
ಮಹಾರಾಷ್ಟ್ರ ಸರ್ಕಾರದ ಆಹಾರ ಮತ್ತು ಔಷಧ ಇಲಾಖೆ ಈ ಲೇಬಲ್‌ಗಳ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಆರೋಗ್ಯಕ್ಕೆ ಅಪಾಯಕಾರಿಯಲ್ಲದೇ ಇದ್ದರೂ, ಈ ಹೇಳಿಕೆಗಳು ಕಾನೂನಾತ್ಮಕವಾಗಿ ಅಕ್ರಮ ಎಂದು ಸರ್ಕಾರ ಡಾಬರ್ ಕಂಪನಿಗೆ ನೋಟಿಸ್ ನೀಡಿತ್ತು. ಇದನ್ನು ಪ್ರಶ್ನಿಸಿ, ಡಾಬರ್ ಮುಂಬೈ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು. ವಿಚಾರಣೆ ವೇಳೆ ಹೈಕೋರ್ಟ್ ಪೀಠವು ಡಾಬರ್ ಕಂಪನಿ ನೀಡಿದ ವಿವರಣೆಯನ್ನು ಅಂಗೀಕರಿಸಿದೆ.
ಡಾಬರ್ ಕಂಪನಿಯು ವಿವಾದಾತ್ಮಕ ಹೇಳಿಕೆಗಳನ್ನು ಸ್ವಯಂಪ್ರೇರಿತವಾಗಿ ಹಿಂಪಡೆಯಲು ತಯಾರಿದ್ದು, ಹೊಸ ಲೇಬಲ್ ಮತ್ತು ಪ್ಯಾಕೇಜಿಂಗ್ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಮೇ 31, 2025ರ ವರೆಗೆ ಹಳೆಯ ಲೇಬಲ್ನೊಂದಿಗೆ ಈ ಉತ್ಪನ್ನಗಳನ್ನು ಮಾರಾಟ ಮಾಡುವ ಅವಕಾಶವಿದ್ದು, ಹೊಸ ಲೇಬಲ್‌ಗಳು ಜೂನ್ 2025 ರಿಂದ ಚಲಾವಣೆಗೆ ಬರಲಿವೆ ಎಂದು ಡಾಬರ್ ದೃಢಪಡಿಸಿದೆ.
