
ಫ್ಲೋರಿಡಾ, ಅಮೇರಿಕಾ: ನಾಸಾ ವಿಜ್ಞಾನಿ ಸುನಿತಾ ವಿಲಿಯಮ್ಸ್ ಮತ್ತು ಅವರ ಸಹಯಾತ್ರಿ ಬುಚ್ ವಿಲ್ಮೋರ್, 9 ತಿಂಗಳ ಕಾಲ ಬಾಹ್ಯಾಕಾಶದಲ್ಲಿ ಕಳೆದ ಬಳಿಕ ಇಂದು ಭೂಮಿಗೆ ಮರಳಲಿದ್ದಾರೆ. ಸುಮಾರು ಒಂದು ವಾರದ ಅಧ್ಯಯನಕ್ಕೆಂದು ಹೋಗಿದ್ದ ತಂಡವು ಬೋಯಿಂಗ್ ಸ್ಟಾರ್ಲೈನರ್ ನಲ್ಲಾದ ತಾಂತ್ರಿಕ ದೋಷಗಳ ಕಾರಣ ವಿಳಂಬಗೊಂಡಿತು. ಇದರಿಂದಾಗಿ ನಾಸಾ, ಸ್ಪೇಸ್ ಎಕ್ಸ್ ನ ತಂಡವು ಡ್ರಾಗನ್ ಕ್ಯಾಪ್ಸೂಲ್ ನಲ್ಲಿ ಅವರನ್ನು ಭೂಮಿಗೆ ವಾಪಸ್ ಕರೆದುಕೊಂಡು ಬರುವ ವ್ಯವಸ್ಥೆ ಮಾಡಿತು.

ಭೂಮಿಗೆ ಮರಳುವ ಪ್ರಕ್ರಿಯೆ ಹೇಗಿರುತ್ತದೆ?
ಬಾಹ್ಯಾಕಾಶಕ್ಕೆ ಹಾರಿದ ವಿಜ್ಞಾನಿಗಳು ಭೂಮಿಗೆ ಹಿಂದಿರುಗುವ ಪ್ರಕ್ರಿಯೆ ರೋಚಕವಾಗಿರುತ್ತದೆ;
- ಹ್ಯಾಚ್ ಅನ್ನು ಮುಚ್ಚುವುದು: ಕ್ರೂ ಡ್ರಾಗನ್ ನ ಹ್ಯಾಚ್ ಅನ್ನು ಸುರಕ್ಷಿತವಾಗಿ ಮುಚ್ಚಲಾಗುತ್ತದೆ.
- ಅನ್ಡಾಕಿಂಗ್: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಕ್ಯಾಪ್ಸೂಲ್ ಬೇರ್ಪಟ್ಟು ಅಲ್ಲಿಂದ ಹೊರಟು ಭೂಮಿಗೆ ಹಿಂತಿರುಗಲು ಪ್ರಾರಂಭಿಸುತ್ತದೆ.
- ಡಿ-ಆರ್ಬಿಟ್ ಬರ್ನ್: ಕ್ಯಾಪ್ಸೂಲನ್ನು ಭೂಮಿಯ ವಾತಾವರಣದ ಪ್ರವೇಶ ಹಂತಕ್ಕೆ ಸರಿಹೊಂದಿಸಲು ನಿಯಂತ್ರಿತ ಎಂಜಿನ್ ಇಂಧನದ ಪ್ರಯೋಗ ಮಾಡಲಾಗುತ್ತದೆ.
- ಭೂ ವಾತಾವರಣ ಪ್ರವೇಶ: ಕ್ಯಾಪ್ಸೂಲ್ ಭೂಮಿಯ ವಾತಾವರಣ ಪ್ರವೇಶಿಸಿದಾಗ ಉಷ್ಣತೆ ಮತ್ತು ತೀವ್ರ ಗುರುತ್ವಾಕರ್ಷಣ ಬಲವನ್ನು ಎದುರಿಸುತ್ತದೆ.
- ಪ್ಯಾರಶೂಟ್ ವಿನ್ಯಾಸ: ಕ್ಯಾಪ್ಸೂಲ್ ನ ಭೂಮಿಗೆ ಇಳಿಯುವ ವೇಗವನ್ನು ನಿಯಂತ್ರಿಸಲು ಎರಡು ಜೋಡಿ ಪ್ಯಾರಶೂಟ್ ಗಳನ್ನು ತೆರೆಯಲಾಗುತ್ತದೆ.
- ಸ್ಪ್ಲ್ಯಾಶ್ ಡೌನ್: ಕ್ಯಾಪ್ಸೂಲ್ ಸುರಕ್ಷಿತವಾಗಿ ಅಟ್ಲಾಂಟಿಕ್ ಮಹಾಸಾಗರದಲ್ಲಿನ, ಫ್ಲೋರಿಡಾ ಕರಾವಳಿಯ ಸಮೀಪ ಇಳಿಯಲಿದೆ.
ನಾಸಾ ಮತ್ತು ಸ್ಪೇಸ್ ಎಕ್ಸ್ ರಕ್ಷಣಾ ತಂಡಗಳು ಸುನಿತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಅವರನ್ನು ಭೂಮಿಗೆ ಸುರಕ್ಷಿತವಾಗಿ ಮರಳಿಸಲು ಸಿದ್ಧರಾಗಿ ನಿಂತಿದ್ದಾರೆ. ಅವರು ಬಾಹ್ಯಾಕಾಶದಲ್ಲಿ 286 ದಿನಗಳ ವರೆಗೆ ಇದ್ದ ಕಾರಣ, ತಾತ್ಕಾಲಿಕವಾಗಿ ಸ್ನಾಯು ಕ್ಷೀಣತೆ ಮತ್ತು ಸಮತೋಲನ ಸಮಸ್ಯೆಗಳು ಎದುರಾಗಬಹುದು. ಆದ್ದರಿಂದ, ಅವರಿಗೆ ತಕ್ಷಣವೇ ವೈದ್ಯಕೀಯ ಪರೀಕ್ಷೆ ಮಾಡಲಾಗುತ್ತದೆ.
ಅಂತರಿಕ್ಷದಲ್ಲಿ ಬೋಯಿಂಗ್ ಸ್ಟಾರ್ಲೈನರ್ ನ ತಾಂತ್ರಿಕ ದೋಷಗಳ ಕಾರಣ ಭೂಮಿಗೆ ಹಿಂದಿರುಗಲಾಗದ ಪರಿಸ್ಥಿಯನ್ನು ಎದುರಿಸುತ್ತಿದ್ದಾಗಲೂ ಧೃತಿಗೆಡದ ವಿಜ್ಞಾನಿಗಳು ಬಾಹ್ಯಾಕಾಶ ನಿಲ್ದಾ ಣದಲ್ಲಿ ಹಲವು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿದರು, ನಿರ್ವಹಣಾ ಕಾರ್ಯಗಳಲ್ಲಿ ತೊಡಗಿಸಿಕೊಂಡರು, ಮತ್ತು ಭವಿಷ್ಯದ ಖಗೋಳಶಾಸ್ತ್ರಜ್ಞರನ್ನು ಪ್ರೇರೇಪಿಸುವ ಕಾರ್ಯವನ್ನು ಮಾಡಿದರು.
ಸುರಕ್ಷಿತವಾಗಿ ಭೂಮಿಗೆ ಬಂದು ಇಳಿದ ನಂತರ ಸುನೀತಾ ವಿಲಿಯಮ್ಸ್ ಮತ್ತು ಅವರ ತಂಡವನ್ನು ಹ್ಯೂಸ್ಟನ್ ನಲ್ಲಿರುವ ನಾಸಾ ಅವರ ಜಾನ್ಸನ್ ಬಾಹ್ಯಾಕಾಶ ಕೇಂದ್ರಕ್ಕೆ ಕರೆದೊಯ್ಯುತ್ತಾರೆ. ಅಲ್ಲಿ ಅವರ ದೈಹಿಕ ಆರೋಗ್ಯವನ್ನು ಪರೀಕ್ಷಿಸಿ, ವಿಶ್ಲೇಷಿಸುತ್ತಾರೆ, ಮಿಷನ್ ಕುರಿತ ವಿವರವಾದ ಸಮೀಕ್ಷೆಗಳು ನಡೆಯುತ್ತವೆ.
ನಾಸಾ ಅಧಿಕಾರಿಗಳು ಸುನೀತಾ ವಿಲಿಯಮ್ಸ್ ಮತ್ತು ಅವರ ತಂಡವು ತೋರಿದ ಸಹನೆ, ದಿಟ್ಟತನ ಮತ್ತು ತ್ಯಾಗವನ್ನು ಹೊಗಳಿದ್ದಾರೆ. ಈ ನಡುವೆ, ಬೋಯಿಂಗ್ ಸ್ಟಾರ್ಲೈನರ್ ನ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ನಾಸಾ ಕಾರ್ಯನಿರ್ವಹಿಸುತ್ತಿದೆ. ನಾಸಾ ಅವರ ಭೂಮಿಗೆ ಮರಳುವ ಪ್ರಕ್ರಿಯೆಯು ಯಶಸ್ವಿಯಾಗಲಿ ಎಂದು ಹಾರೈಸೋಣ.